ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಕ್ಷಣವೇ ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್‌ವಾದಿಗಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಬೀದರ್ ನಗರದ ಅಂಬೇಡ್ಕರ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ತಲುಪಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಕಾರ್ಯಕರ್ತರು ಅಂಬೇಡ್ಕರ್ ಅವರ ಭಾವಚಿತ್ರ ಕೈಯಲ್ಲಿ ಹಿಡಿದುಕೊಂಡು ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆನಂತರ ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಛತ್ರಪತಿ ಶಿವಾಜಿ ವೃತ್ತದ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ಉಮೇಶ ಸ್ವಾರಳ್ಳಿಕರ್ ಮಾತನಾಡಿ, ʼಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಕೀಳಾಗಿ ಮಾತನಾಡಿದ್ದು ತೀವ್ರವಾಗಿ ಖಂಡಿಸುತ್ತೇವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡಿದ ಅಮಿತ್ ಶಾ ವಿರುದ್ಧ ಕೂಡಲೇ ದೇಶದ್ರೋಹ ಪ್ರಕರಣ ದಾಖಲಿಸಬೇಕುʼ ಎಂದು ಆಗ್ರಹಿಸಿದರು.
ಚಿಂತಕ ಶಿವಶರಣಪ್ಪ ಹುಗ್ಗೆ ಪಾಟೀಲ್ ಮಾತನಾಡಿ, ʼಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು ಬೇಷರತ್ ರಾಜೀನಾಮೆ ನೀಡಬೇಕು. ಅಂಬೇಡ್ಕರ್ ಅಂದ್ರೆ ನಮ್ಮೆಲ್ಲರಿಗೂ ದೊಡ್ಡ ಶಕ್ತಿ ಇದ್ದಂತೆ. ಇಡೀ ಜಗತ್ತು ಅವರನ್ನು ಸ್ಮರಿಸುತ್ತದೆ. ಅಂತಹ ಮಹಾನ್ ಚೇತನ್ ಕುರಿತು ಕೀಳಾಗಿ ಮಾತನಾಡಿದ್ದು ಭಾರತೀಯರ ಮನಸ್ಸಿಗೆ ಘಾಸಿಗೊಳಿಸಿದೆ. ದೇಶದಲ್ಲಿ ಇರುವ ಗುಲಾಮಿಯನ್ನು ಕಿತ್ತೊಗೆದು ದೇಶಕ್ಕೆ ಸ್ವಾತಂತ್ರ್ಯ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದು ಸಹಿಸುವುದಿಲ್ಲ. ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಬೇಕುʼ ಎಂದು ಒತ್ತಾಯಿಸಿದರು.

ಹಿರಿಯ ಮುಖಂಡ ವಿಠಲದಾಸ್ ಪ್ಯಾಗೆ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ಬಹಳ ಆಳವಾಗಿ ಬೇರೂರಿದ್ದಾರೆ. ಸಂವಿಧಾನದಿಂದ ನಾವು ಎಲ್ಲ ಹಕ್ಕುಗಳು ಪಡೆದುಕೊಂಡು ಘನತೆಯಿಂದ ಬದುಕಲು ಸಾಧ್ಯವಾಗಿದೆ. ಸಂವಿಧಾನ ಉಳಿದರೆ, ದೇಶ ಉಳಿಯುತ್ತದೆ. ಆದರೆ ಆರ್‌ಎಸ್‌ಎಸ್, ಬಿಜೆಪಿ ದೇಶ ಅಭಿವೃದ್ಧಿ ದಾಪುಗಾಲು ಹಾಕಬಾರದು, ಈ ದೇಶಕ್ಕೆ ಅಡ್ಡಿ ಆತಂಕಗಳು ಸದಾ ಇರುವ ನಿಟ್ಟಿನಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಹುನ್ನಾರ ನಿರಂತರವಾಗಿ ನಡೆಸುತ್ತಿದೆʼ ಎಂದರು.
ʼಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದು ನಾವೆಲ್ಲರೂ ಖಂಡಿಸಬೇಕಿದೆ. ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಮೂಲಕ ಅಮಿತ್ ಶಾ ಮಜ್ಬೂರ್ ಆಗಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಿಸೋಣ’ ಎಂದು ಕರೆ ನೀಡಿದರು.
ʼಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುತ್ತಿರುವ ಕಾರಣಕ್ಕೆ ನಾವೆಲ್ಲರೂ ಭಾರತವೆಂಬ ಸ್ವರ್ಗದಲ್ಲಿದ್ದೇವೆ. ಆದರೆ ಸಚಿವ ಅಮಿತ್ ಶಾ ಅವರಿಗೆ ಇನ್ನೂ ಸ್ವರ್ಗ ಕಾಣಿಸುತ್ತಿಲ್ಲ. ಬಾಬಾ ಸಾಹೇಬ್ ಅವರು ಸಂವಿಧಾನ ನೀಡದಿದ್ದರೆ ಅಮಿತ್ ಶಾ ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವರಾಗಲು ಸಾಧ್ಯವಾಗುತ್ತಿರಲಿಲ್ಲ. ಅಧಿಕಾರದ ದರ್ಪದಿಂದ ಮಾತ್ರ ಹೀಗೆ ಅವಹೇಳನಕಾರಿ ಮಾತಾಡಲು ಸಾಧ್ಯ. ಅವರು ದೇಶ ಒಡೆಯುವ ಪ್ರಯತ್ನಕ್ಕೆ ಕೈಹಾಕಿದರೆ, ನಾವು ದೇಶ ಕಟ್ಟುವ ಕೆಲಸಕ್ಕೆ ಒಗ್ಗೂಡಬೇಕಿದೆʼ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಗೊರನಾಳಕರ್ ಮಾತನಾಡಿ, ʼರಾಜ್ಯಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅಪಮಾನಿಸಿ ಗೃಹ ಸಚಿವ ಅಮಿತ್ ಶಾ ದೊಡ್ಡ ತಪ್ಪು ಎಸಗಿದ್ದಾರೆ. ಇದರಿಂದ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಆಗಿದೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಹತ್ತು ದಿನಗಳಲ್ಲಿ ಬೀದರ್ ಬಂದ್‌ಗೆ ಕರೆ ನೀಡಿ ಹೋರಾಟ ತೀವ್ರಗೊಳಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಸಮಿತಿಯ ಗೌರವಾಧ್ಯಕ್ಷ ರಾಜಕುಮಾರ್ ಮೂಲಭಾರತಿ, ಚಂದ್ರಕಾಂತ ನಿರಾಟೆ, ಉಪಾಧ್ಯಕ್ಷ ರಾಜಕುಮಾರ್ ಗುನ್ನಳ್ಳಿ ಪ್ರಮುಖರಾದ ಬಾಬುರಾವ್ ಹೊನ್ನಾ, ಓಂಪ್ರಕಾಶ್ ರೊಟ್ಟೆ, ಮುಬಸೀರ್ ಸಿಂಧೆ, ಮುನ್ನಾ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪೀಲ್ ಗೋಡಬೋಲೆ, ಸೈಯದ್ ವಹೀದ್ ಲಖನ್ ಮತ್ತಿತ್ತರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಯುವಜನರ ಜೀವಕ್ಕೆ ಕುತ್ತು ತರುತ್ತಿರುವ ಮೋಸದಾಟ: ಆನ್‌ಲೈನ್ ಗೇಮಿಂಗ್ ಬಗ್ಗೆ ಇರಲಿ ಎಚ್ಚರ
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ವಿಷ್ಣುವರ್ಧನ್ ವಾಲದೊಡ್ಡೆ, ಅಭಿ ಕಾಳೆ, ಗೌತಮ್ ಬಗದಲಕರ್, ಅಂಬರೀಶ ಕುದುರೆ, ಪವನ್ ಮಿಠಾರೆ, ಹರ್ಷಿತ ದಾಂಡೇಕರ್, ಪ್ರಕಾಶ ರಾವಣ, ಜೈಶೀಲ ಮೇತ್ರೆ, ವಿನಯಕುಮಾರ್ ಮಾಳಗೆ, ಅಮೃತ ಮುತ್ತಂಗಿಕರ್, ರಾಹುಲ್ ಡಾಂಗೆ, ಜ್ಞಾನೇಶ್ವರ ಸಿಂಗಾರೆ, ಶಂಕರ ಫುಲೆ, ಸಂಜಯ ಭೋಸ್ಲೆ, ಸಂಜಕುಮಾರ್ ಮೇತ್ರೆ, ವಿನೀತ ಗಿರಿ, ಶಫೀವುಲ್ಲಾ ಬೇಗ್, ಅಮೃತ್ ಮೋಳಕೆರೆ, ರಾಜಕುಮಾರ್ ಡೊಂಗರೆ, ಕಲ್ಯಾಣರಾವ್ ಭೋಸ್ಲೆ, ರಾಜಕುಮಾರ್ ಭಾವಿಕಟ್ಟಿ ಜಗನಾಥ ಹೊನ್ನಾ ಸೇರಿದಂತೆ ಅನೇಕರು ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.