ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜ.23ರಂದು ‘ಸಂವಿಧಾನ ವಿರುದ್ಧ ಮನುವಾದ’ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ತಿಳಿಸಿದ್ದಾರೆ.
ʼರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅವರ ವಿರುದ್ಧ ಕೀಳಾಗಿ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಆಗಬೇಕು, ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮೇ ಕೇಳಲೇಬೇಕು ಹಾಗೂ ಅಂಬೇಡ್ಕರರ ಸಂವಿಧಾನವನ್ನು ಒಪ್ಪದವರು ದೇಶ ಬಿಟ್ಟು ತೋಲಗಲಿ ಎಂಬ ಘೋಷಣೆಯೊಂದಿಗೆ ಮನುವಾದಿ ಆರ್‌ಎಸ್‌ಎಸ್ -ಬಿಜೆಪಿಯ ಮೂಲೋತ್ಪಾಟನೆಗೆ ಸನ್ನದ್ಧರಾಗಲು ಭಾಗವಹಿಸೋಣʼ ಎಂದು ಹೇಳಿದರು.
ಸ್ವಾಭಿಮಾನಿ ದಲಿತ ಯುವ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧದ ಬಿಜೆಪಿಯ ಪಿತೂರಿ ರಾಜಕಾರಣವನ್ನು ಹಿಮ್ಮೆಟ್ಟಿಸಲು ಆಗ್ರಹಿಸಿ ಜಿಲ್ಲೆಯಿಂದ ಅಂಬೇಡ್ಕರ್ ಅನುಯಾಯಿಗಳು, ಸಂವಿಧಾನವಾದಿಗಳು ಹೊರಡಲಿದ್ದೇವೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ದಲಿತ ಮುಖಂಡರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಜಕುಮಾರ್ ಬನ್ನಿ, ರಮೇಶ ಸಾಗರ್ ಮನವಿ ಮಾಡಿದರು.
ಜ.24ರಂದು ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ :
ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಆಂಧ್ರಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ದಿ ಪಡಿಸಲೂ ಆಗ್ರಹಿಸಿ ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಡಿನ ಭಿಕ್ಕು ಮತ್ತು ಭಿಕ್ಕುಣಿ ಸಂಘದ ಭಂತೆ ಭೋಧಿದತ್ತ ಅವರ ನೇತೃತ್ವದಲ್ಲಿ ನವೆಂಬರ್ 15 ರಂದು ಸನ್ನತಿಯಿಂದ ಪ್ರಾರಂಭವಾದ ಪಂಚಶೀಲ ಪಾದಯಾತ್ರೆ ಸಮಾರೋಪ ಸಮಾರಂಭ ಜ.24 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಫ್ರೀಡಮ್ ಪಾರ್ಕ್‍ನಲ್ಲಿ ನಡೆಯಲಿದೆ ಎಂದು ಸಮಾರೋಪ ಸಮಾರಂಭ ಸಮಿತಿಯ ರಮೇಶ ಡಾಕುಳಗಿ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ಜನರು ಶಾಂತಿಪೂರ್ವಕವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿ ಪ್ರೀಡಂ ಪಾರ್ಕ್ ತಲುಪಿ ಬಹಿರಂಗ ಸಭೆಯಲ್ಲಿ ಸಮಾರೋಪಗೊಳ್ಳಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ l ಆನ್‌ಲೈನ್ ಗೇಮಿಂಗ್ : ಲಕ್ಷಾಂತರ ಹಣ ಕಳೆದುಕೊಂಡ ಯುವಕ ಅತ್ಮಹತ್ಯೆ
ಈ ಅಂತಿಮ ಘಟ್ಟದ ಪಾದಯಾತ್ರೆಯಲ್ಲಿ ಕರ್ನಾಟಕ ರಾಜ್ಯದ ಸಮಸ್ತ ಬಿಕ್ಕು ಸಂಘ ಬೌದ್ಧ ಸಂಘ ಸಂಸ್ಥೆಗಳು, ಎಲ್ಲಾ ದಲಿತ ಸಂಘರ್ಷ ಸಮಿತಿಗಳ ರಾಜ್ಯ ಸಂಚಾಲಕರು, ಮುಖಂಡರು, ನೌಕರರು, ವಿದ್ಯಾರ್ಥಿ ಯುವಜನರು, ಕಾರ್ಮಿಕರು, ಮಹಿಳೆಯರು ಮತ್ತು ಪ್ರಗತಿಪರ ಚಿಂತಕರು ಭಾಗವಹಿಸುವರು. ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಹೀಗಾಗಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶ್ವಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.