“ಅಮಿತ್ ಶಾ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಇದು ದೇಶದ ಬಹುಜನರಿಗೆ ನೋವನ್ನುಂಟು ಮಾಡಿದೆ. ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ ಜನವರಿ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಈ ಪ್ರತಿಭಟನೆಗೆ ಸಾವಿರಾರು ಜನರು ಭಾಗಿಯಾಗಲಿದ್ದಾರೆ” ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “”ಡಾ. ಬಿ.ಆರ್ ಅಂಬೇಡ್ಕರ್‌ರವರು ಭಾರತದ ರತ್ನ ಮಾತ್ರವಲ್ಲ, ವಿಶ್ವದ ರತ್ನ. ವಿಶ್ವದ ಶೋಷಿತ ಜನಚಳವಳಿಗಳು ಅಂಬೇಡ್ಕರ್ ಅವರನ್ನು ತಮ್ಮ ವಿಮೋಚಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಬರಹ ಮತ್ತು ಭಾಷಣಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ, ಅಂಬೇಡ್ಕರ್ ಜನಿಸಿದ ಭಾರತದಲ್ಲಿ ಕೆಲವು ದುಷ್ಟ ಶಕ್ತಿಗಳು ಅವರ ಹೆಸರನ್ನು ಹಿಡಿದು ವ್ಯಂಗ್ಯ ಮಾಡುತ್ತಿವೆ. ಕೇಂದ್ರ ಗೃಹಮಂತ್ರಿ, ಬಿಜೆಪಿ ನಾಯಕ ಅಮಿತ್ ಶಾ ಸಂಸತ್ತಿನಲ್ಲಿ ಉದ್ದೇಶಪೂರ್ವಕವಾಗಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಪುಡಿ ರೌಡಿಯಂತೆ ವರ್ತಿಸಿದ್ದಾರೆ. ಅಂಬೇಡ್ಕರ್ ಕುರಿತು ಆಡಿರುವ ಮಾತುಗಳು ಆತನ ‘ವಿಷಯುಕ್ತ ಮನಸ್ಸನ್ನು’ ಬಹಿರಂಗಪಡಿಸಿದೆ” ಎಂದರು.
“ಬಾಬಾಸಾಹೇಬರಿಗೆ ಅವಮಾನ ಮಾಡಿರುವ ಅಮಿತ್ ಶಾ ಸ್ವಲ್ಪವೂ ಹಿಂಜರಿಕೆ ಇಲ್ಲದೆ ತನ್ನ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾನೆ. ಈತನ ದೇಶದ್ರೋಹಿ ಮಾತುಗಳನ್ನು ಖಂಡಿಸಬೇಕಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಆತನ ಬೆನ್ನಿಗೆ ನಿಂತಿದ್ದಾರೆ. ಇಂತಹವರಿಂದ ನಾವು ಪಶ್ಚಾತ್ತಾಪ ಅಥವಾ ನ್ಯಾಯವನ್ನು ಬಯಸಲು ಸಾಧ್ಯವೇ” ಎಂದು ಪ್ರಶ್ನಿಸಿದರು.
“ಈಗಾಗಲೇ, ದೇಶ ಅನೇಕ ರೀತಿಯ ತೊಂದರೆಗಳಿಗೆ ಸಿಕ್ಕಿಹಾಕಿಕೊಂಡಿದೆ. ದೇಶದ ಯುವಜನರನ್ನು ನಿರುದ್ಯೋಗ ಕಾಡುತ್ತಿದೆ. ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಹೀಗಾಗಿ, ಉದ್ಯೋಗ ಇಲ್ಲದೇ, ನಿರುದ್ಯೋಗ ಹೆಚ್ಚುತ್ತಿದೆ. ಇದೆಲ್ಲವನ್ನು ಮರೆಮಾಚುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಹಾಗಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಜವಾದ ಸಂವಿಧಾನವನ್ನು ಒಪ್ಪಿಕೊಳ್ಳುವ ಮನಸ್ಸುಗಳು ಬರಬೇಕು. ಕಾಂತರಾಜು ಆಯೋಗದ ವರದಿ ಸರ್ಕಾರದ ಬಳಿ ಇದೆ. ಕೂಡಲೇ ವರದಿಯನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು ಜನರ ಅಭಿಪ್ರಾಯಕ್ಕೆ ಬಿಡಬೇಕು. ಹಾಗೆಯೇ, ಬಿಜೆಪಿಯವರು ಉದ್ದೇಶಪೂರ್ವಕವಾಗಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಪಿತೂರಿಗಳನ್ನ ಮಾಡುತ್ತಿದ್ದಾರೆ. ಇದನ್ನ ಕೂಡಲೇ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಇಂದೂಧರ ಹೊನ್ನಾಪುರ ಮಾತನಾಡಿ, “ಕೊಲೆಯ ಆರೋಪವೊಂದರಲ್ಲಿ ಆರೋಪಿಯಾಗಿ, ಗಡಿಪಾರಾಗಿದ್ದ ವ್ಯಕ್ತಿ ಈ ದೇಶದ ಗೃಹಮಂತ್ರಿಯಾಗಿರುವುದು ವಿಪರ್ಯಾಸ. ಆದರೆ, ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಬಗ್ಗೆ ತುಚ್ಛವಾಗಿ ನಿಂದಿಸಿದ್ದಾರೆ. ಈ ಮೂಲಕ ಎಲ್ಲ ಜಾತ್ಯಾತೀತ ಮನಸ್ಸುಗಳಿಗೆ ನೋವನ್ನುಂಟು ಮಾಡಿದ್ದಾರೆ. ಭಾರತ ದೇಶದ ಕಾನೂನಿನ ಪ್ರಕಾರ ಅಪರಾಧ ಮಾಡಿದ್ದಾರೆ. ಆ ಕಾನೂನಿನ ಪ್ರಕಾರ ಅಮಿತ್ ಶಾ ಅವರನ್ನು ನರೇಂದ್ರ ಮೋದಿ ಅವರು ವಜಾ ಮಾಡಬೇಕಿತ್ತು. ಆದರೆ, ಅವರನ್ನು ಮೋದಿ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಬಿಜೆಪಿಯವರು ದೇಶದ್ರೋಹವನ್ನು ತಮ್ಮ ಮನೆ ದೇವರಾಗಿ, ಸಿದ್ಧಾಂತವಾಗಿ ಮಾಡಿಕೊಂಡಿದ್ದಾರೆ. ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡುವವರೆಗೂ ನಾವುಗಳು ವಿರಮಿಸುವುದಿಲ್ಲ. ಅಂಬೇಡ್ಕರ್ ವಿರುದ್ಧ ಕ್ಷುಲಕ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ. ಇದನ್ನು ಖಂಡಿಸುತ್ತೇವೆ. ಅಮಿತ್ ಶಾರನ್ನು ಮನೆಗೆ ಕಳಿಸುವರೆಗೂ ನಾವು ಚಳುವಳಿ ನಿಲ್ಲಿಸುವುದಿಲ್ಲ” ಎಂದರು.
“ಬಿಜೆಪಿಯವರನ್ನು ಸಾಕಿ ಸಲಹುತ್ತಿರುವ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಈ ಹಿಂದಿನಿಂದಲೂ ಅಂಬೇಡ್ಕರ್ ಅವರನ್ನು ಹೀಯಾಳಿಸುತ್ತಲೇ ಬಂದಿದೆ. ‘ಅಂಬೇಡ್ಕರ್ ಮತ್ತು ಅಸ್ಪೃಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ’ ಎಂದಿದ್ದ ಹಿಂದೂ ಮಹಾ ಸಭಾ ಮತ್ತುಅದರ ಸಂತತಿಗೆ ಅಂಬೇಡ್ಕರ್ ಎಂದಿಗೂ ಶತ್ರುವಂತೆ ಕಂಡಿದ್ದಾರೆ. ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟರೆ ಈ ಸಂಘಪರಿವಾರದ ದೇಶದ್ರೋಹಿಗಳು ಮನುಸ್ಮೃತಿಯನ್ನು ಅತ್ಯಂತ ಪೂಜನೀಯ ಗ್ರಂಥವೆನ್ನುತ್ತಾರೆ. ಅಂಬೇಡ್ಕರ್ ಜಾತಿವಿನಾಶ ಎಂದರೆ, ಈ ಸನಾತನಿಗಳು ಜಾತಿಪದ್ಧತಿಯೇ ಶ್ರೇಷ್ಠ ಎನ್ನುತ್ತಾರೆ. ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಘನತೆ ತರಲು ಹೊರಟರೆ, ಈ ಆರ್‌ಎಸ್‌ಎಸ್ ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರವನ್ನೇ ಸುಟ್ಟು ಪ್ರತಿಭಟನೆ ಮಾಡಿದರು. ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಿದ ಅಂಬೇಡ್ಕರ್ ಅವರನ್ನು ‘ವಿಕೃತ’ ಎಂದು ಕರೆದ ಪಾಪಿಗಳು ಈ ನೀಚರು. ಇಂತಹ ಅಂಬೇಡ್ಕರ್ ವಿರೋಧಿ ದ್ರೋಹಿಗಳು ಎಂದಾದರು ಅವರನ್ನು ಎದೆಗೆ ಹಾಕಿಕೊಳ್ಳುವುದುಂಟೆ? ಅಂಬೇಡ್ಕರ್ ಪ್ರಜ್ಞೆಯ ದಲಿತರನ್ನು ಅಪ್ಪಿಕೊಳ್ಳುವುದುಂಟೆ? ಅಂಬೇಡ್ಕರ್ ಎಂದರೆ ಇವರಿಗೆ ದುಃಸ್ವಪ್ನ, ಹಾಗಾಗಿ ಅವರನ್ನು ಗುಪ್ತವಾಗಿ ನಾಗಪುರದ ಕಚೇರಿ, ಸಭೆಗಳಲ್ಲಿ ಹೀಗಳೆಯುತ್ತಿದ್ದವರು ಇಂದು ಸಂಸತ್ತಿನಲ್ಲಿಯೇ ವ್ಯಂಗ್ಯವಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಭಾರತದ ದಲಿತರ ಪರಿಸ್ಥಿತಿಯನ್ನು ಇಂತಹ ನರಕ ಸದೃಶವಾಗಿಸಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ತನ್ನ ಜಾತಿವಾದಿ- ಕೋಮುವಾದಿ ದುರಾಡಳಿತದ ವಿರುದ್ಧ ಗಟ್ಟಿಯಾಗಿ ದನಿ ಎತ್ತುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಎದುರಿಸಲಾಗದೇ ಹೇಡಿಗಳಂತೆ ಅವರ ಮಗ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಆರೋಪ ಹೊರಿಸಿ ಸ್ವಾಭಿಮಾನಿ ದಲಿತ ಯುವ ನಾಯಕರ ಬಾಯಿ ಮುಚ್ಚಿಸಲು ಮುಂದಾಗಿದೆ. ಆದರೆ, ಅಂಬೇಡ್ಕರ್ ಪ್ರಜ್ಞೆಯುಳ್ಳ ದಲಿತ ಬಂಧುಗಳು ಇಂತಹ ಪೊಳ್ಳು ಬೆದರಿಕೆಗೆ ಬಗ್ಗುವವರಲ್ಲ. ಅನ್ಯಾಯದ ವಿರುದ್ಧ ತಲೆಎತ್ತಿ ಹೋರಾಡುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
“ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪುಟದಿಂದ ವಜಾ ಆಗಬೇಕು. ಆತ ಮಾಡಿದ ತಪ್ಪಿಗಾಗಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮೆ ಕೇಳಬೇಕು. ಅಮಿತಾ ಶಾ ಹೇಳಿಕೆಯನ್ನು ಖಂಡಿಸಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ರ‍್ಯಾಲಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನವರಿ 23 ರಂದು ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಸುಮಾರು 25ರಿಂದ 30 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಅಮಿತಾ ಶಾ ವಿರುದ್ಧ ಕ್ರಮವಾಗುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ” ಎಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸುಳ್ಳು ಮೊಕದ್ದಮೆಗಳಲ್ಲಿ ಸಿಲುಕಿಸಿ ತೇಜೋವಧೆ ಮಾಡಲು ಯತ್ನಿಸುತ್ತಿರುವ ಬಿಜೆಪಿ ತನ್ನ ಕುತಂತ್ರಗಳನ್ನು ಕೂಡಲೇ ನಿಲ್ಲಿಸಬೇಕು. ಹಾಗೇಯೇ, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಾಂತರಾಜ ಆಯೋಗದ ಜಾತಿ ಜನಗಣತಿ ವರದಿಯನ್ನು ಯಾವುದೇ ನೆಪ ಹೇಳದೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕಡ್ಡಾಯವಾಗಿ ಮಂಡಿಸಿ ಅನುಷ್ಠಾನಗೊಳಿಸಬೇಕು. ಜತೆಗೆ, ದಲಿತ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಕೂಡಲೇ ದಲಿತ ಸಂಘಟನೆಗಳ ಸಭೆಯನ್ನು ಕರೆಯಬೇಕು” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್ ವೆಂಕಟೇಶ, ವಿ.ನಾಗರಾಜ್, ಎನ್ ಮುನಿಸ್ವಾಮಿ, ಜೀವನಹಳ್ಳಿ ವೆಂಕಟೇಶ್ ಇದ್ದರು.