ದೇಶದಲ್ಲಿ ಸುಳ್ಳಿನ ರಾಜಕಾರಣ ನಡೆಯುತ್ತಿದೆ. ಅದರಲ್ಲೂ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವಂತ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆ ತರುವ ಮೂಲಕ ನಾವು ವಕ್ಫ್ ಆಸ್ತಿ ಉಳಿಸುವುದಕ್ಕಾಗಿ ಕಾಯ್ದೆ ತಂದಿದ್ದೇವೆಂದು ಸಬೂಬು ಹೇಳುತ್ತಿದ್ದಾರೆ ಎಂದು ಕಲೀಮ್ ಅಹಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮೇ 3ರಂದು ನಡೆಯುವ ಬೃಹತ್ ಪ್ರತಿಭಟನೆ ಸಂಬಂಧ ಮೈಸೂರು ನಗರದ ನಲಪಾಡ್ ಹೋಟೆಲ್‌ನಲ್ಲಿ ಬುಧವಾರ ನಡೆದ ಪ್ರಗತಿಪರ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“20 ಲಕ್ಷ ಎಕರೆಯಷ್ಟಿದ್ದ ಭೂಮಿ ಈಗ 30 ಲಕ್ಷ ಎಕರೆಗೆ ಏರಿಕೆಯಾಗಿದೆ ಎನ್ನುವ ಸುಳ್ಳಿನ ಅನಾವರಣವಾಗಿದೆ. ಪ್ರಚಾರಕ್ಕಾಗಿ ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು, ಸುಳ್ಳು ಪ್ರಚಾರದ ಮೂಲಕ ನಿಜ ಎನ್ನುವಂತೆ ಬಿಂಬಿಸುತ್ತಿದೆ. ವಕ್ಫ್ ಕಮಿಟಿಯಲ್ಲಿ ಮುಸ್ಲಿಮೇತರರನ್ನು ಸೇರ್ಪಡೆ ಮಾಡಿರುವುದು ಭ್ರಷ್ಟಾಚಾರ ತಡೆಯಲು ಎಂದು ಸಮರ್ಥನೆ ಮಾಡಿಕೊಂಡಿದೆ. ವಕ್ಫ್ ಒಂದು ಧಾರ್ಮಿಕ ಸಂಸ್ಥೆ. ಇದನ್ನು ಸರ್ಕಾರಿ ಸಂಸ್ಥೆಯಾಗಿ ಯಾಕೆ ಪರಿಗಣಿಸುತ್ತೀರಿ” ಎಂದು ಪ್ರಶ್ನಿಸಿದರು.

ಜನಾಂದೋಲನ ಮಹಾ ಮೈತ್ರಿಯ ಉಗ್ರ ನರಸಿಂಹೇಗೌಡ ಮಾತನಾಡಿ, “ಭಾರತದ ಒಕ್ಕೂಟ ಸರ್ಕಾರ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಚಾರ್ ಸೌ ಪಾರ್ ಅಂದವರು, ದೋ ಸೌ ದಾಟಲಾರದೆ ತಿಣುಕಾಡಿದ್ದಾರೆ. ಅದರಲ್ಲೂ, ಅತ್ಯಂತ ಹೆಚ್ಚಿನ ಪ್ರಭಾವ ಹೊಂದಿದ್ದ ಉತ್ತರ ಪ್ರದೇಶದಂತ ರಾಜ್ಯದಲ್ಲಿ ತನ್ನ ಹಿಡಿತ ಕಳೆದುಕೊಂಡಿದೆ. ಈಗ ಅವರಿಗೆ ಹಿಂದೂ ಮತಗಳ ಒಗ್ಗೂಡುವಿಕೆ ಅತ್ಯಗತ್ಯ. ಈ ಹಿನ್ನಲೆ ಇಟ್ಟುಕೊಂಡೇ ವಕ್ಫ್ ತಿದ್ದುಪಡಿ ಕಾಯ್ದೆ ತಂದಿದ್ದಾರೆ. ಪುಲ್ವಾಮ ಘಟನೆಯಿಂದ ಹಿಡಿದು ಇಂದಿನ ಪಹಲ್‌ಗಾಮ್ ಘಟನೆವರೆಗೂ ರಾಜಕೀಯ ಅಸ್ತ್ರವಾಗಿ ಬಳಸಿದವರು” ಎಂದು ಕಟುವಾಗಿ ಟೀಕಿಸಿದರು.

ಜಾಗೃತ ಕರ್ನಾಟಕದ ಸುಹೇಲ್ ಅಹಮದ್ ಮಾತನಾಡಿ, “ವಕ್ಫ್ ವಿವಾದ ಅಲ್ಲ, ಇದೊಂದು ಸಂಘರ್ಷ. ಭಾವನಾತ್ಮಕ ವಿಷಯ ಕೆದಕಿದರೆ ಲಾಭ ಬರುತ್ತದೆ ಅನ್ನುವುದು ಮನುವಾದಿಗಳ ಲೆಕ್ಕಾಚಾರ. ಬಾಬರಿ ಮಸೀದಿಯಿಂದ ಹಿಡಿದು ಇದುವರೆಗಿನ ವಿಚಾರಗಳನ್ನು ಮನನ ಮಾಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಈಗ ವಕ್ಫ್ ಎನ್ನುವ ಆಸ್ತಿ ವಿಚಾರವೂ ಅಷ್ಟೇ. ಅದನ್ನು ದೊಡ್ಡದು ಮಾಡಿ ದೇಶದಲ್ಲಿ ಮತ ಬ್ಯಾಂಕ್ ಗಟ್ಟಿಗೊಳಿಸುವುದಕ್ಕಾಗಿ ತಂದ ಕಾಯ್ದೆ. ಇದೆಲ್ಲವೂ ರಾಜಕೀಯ ಲಾಭಕ್ಕಾಗಿಯೇ ನಡೆಯುತ್ತಿದೆ. ಭಾವನಾತ್ಮಕ ಒಡನಾಟ, ಒಪ್ಪುವ-ಅಪ್ಪುವ ಕೆಲಸವಾಗಬೇಕು. ದೇಶದ ಸಮಗ್ರ ವಿಚಾರ ಬಂದಾಗ ಸಂವಿಧಾನದಡಿಯಲ್ಲಿ ಎಲ್ಲರೂ ಒಂದಾಗಬೇಕು” ಎಂದು ಕರೆಕೊಟ್ಟರು.
ಬಾರುಕೋಲು ರಂಗಸ್ವಾಮಿ ಮಾತನಾಡಿ, “ಬಹಳಷ್ಟು ಬಾರಿ ವಕ್ಫ್ ತಿದ್ದುಪಡಿಯಾಗಿದ್ದರೂ ವಿವಾದ ಆಗಿರಲಿಲ್ಲ. ಈ ಬಾರಿ ವಿವಾದ ಆಗಿದೆ. ಈ ಬಾರಿಯ ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ಬಾಹಿರವಾಗಿದ್ದು, ಯಾವುದೇ ರೀತಿಯ ಮಾನದಂಡ ಹೊಂದಿಲ್ಲ. ಧರ್ಮದ ಹೇರಿಕೆಯಾಗಿದೆ. ಸಾಕಷ್ಟು ಸುಳ್ಳು ಮಾಹಿತಿಗಳ ಮೂಲಕ ಜಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಮುಖ್ಯ ಗುರಿ ಮತಕ್ಕಾಗಿ ಹಿಂದೂಗಳನ್ನು ಒಂದುಗೂಡಿಸುವುದು. ಅದರ ತಂತ್ರಗಾರಿಕೆಯ ಭಾಗವೇ ವಕ್ಫ್ ತಿದ್ದುಪಡಿ ಕಾಯ್ದೆ” ಎಂದು ಕುಟುಕಿದರು.

ಸವಿತಾ ಪಾ ಮಲ್ಲೇಶ್ ಮಾತನಾಡಿ, “ಮನುವಾದಿಗಳ ವಿರುದ್ಧ ನಿರಂತರ ಹೋರಾಟ ಮುಖ್ಯವಾದದ್ದು. ವೈದಿಕರು ಸ್ವಾರ್ಥಕ್ಕಾಗಿ ಯಾವ ಸಮಯದಲ್ಲಿ ಏನು ಬೇಕಾದರೂ ಮಾಡಬಲ್ಲರು. ಯಾವುದನ್ನು ಬೇಕಾದರೂ ನಿಜವೆಂದು ಬಿಂಬಿಸಬಲ್ಲರು. ಸುಳ್ಳನ್ನೇ ಪದೇ ಪದೆ ಹೇಳಿ ಸತ್ಯ ಅನ್ನಿಸುವಲ್ಲಿ ನಿಸ್ಸೀಮರು. ಸುಳ್ಳಿನ ಬಲೆ ಹೆಣೆದು ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಯಾವ ಸಮಯದಲ್ಲಿ ಏನೇ ಮಾಡಲು ಹೇಸದವರು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದನ್ನ ಅರಿತು ನಾವು ಏನು ಮಾಡಬೇಕು ಎಂಬುದನ್ನು ಮೊದಲು ತಿಳಿಯಬೇಕು. ಧರ್ಮಗಳನ್ನು ಮೀರಿ ಕೆಲಸ ಮಾಡಬೇಕು. ಎಲ್ಲರೂ ಒಟ್ಟುಗೂಡಿ ಸಾಗಬೇಕು. ಪ್ರೀತಿ, ಸೌಹಾರ್ದತೆ, ಶಾಂತಿಯಿಂದ ಹೋರಾಟ ಮಾಡಬೇಕು. ನಾವೆಲ್ಲಾ ಒಂದು ಎನ್ನುವುದೇ ನಮ್ಮ ಅಸ್ತ್ರವಾಗಬೇಕು” ಎಂದು ಸಲಹೆ ನೀಡಿದರು.

ಅಹಿಂದ ಮುಖಂಡ ಕೆ ಶಿವರಾಮ್ ಮಾತನಾಡಿ, “ಸಮಾಜದಲ್ಲಿ ಯಾಕೆ ದಿಕ್ಕು ತಪ್ಪುತ್ತೇವೆ ಅಂದರೆ ಜಾಗೃತಿ ಇಲ್ಲದೆ ಇರುವುದೇ ಕಾರಣ. ಚುನಾವಣೆಗಾಗಿ ರಾಜಕೀಯ. ರಾಜಕೀಯಕ್ಕಾಗಿ ಧರ್ಮ, ಜಾತಿ. ಯಾವ ಮಟ್ಟಕ್ಕೆ ಇಳಿದಿದ್ದಾರೆ ಅಂದ್ರೆ ಸಾವಿರ ಸಲ ಸುಳ್ಳು ಹೇಳಿ ಅದನ್ನೇ ನಂಬಿಸಿ, ವಿಶ್ವಾಸಗಳಿಸಿ ಮತ ಕೇಂದ್ರೀಕೃತವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಯಾವ ಸಮಯದಲ್ಲಿ ಯಾವ ವಿಚಾರ ತರಬೇಕು. ಯಾವ ಸಂದರ್ಭಕ್ಕೆ ಯಾವ ವಿಷಯ ಲಾಭ ತರುತ್ತದೆ ಎನ್ನುವುದು ಚೆನ್ನಾಗಿ ಅರಿತಿದ್ದಾರೆ. ಇಂಥವರಿಗೆ ಬುದ್ದಿ ಕಲಿಸಲೇಬೇಕು. ಸುಳ್ಳುಗಳನ್ನು ಬಟಾಬಯಲು ಮಾಡುವ ಕೆಲಸ ಆಗಬೇಕಿದೆ. ಆದ್ದರಿಂದ ಇದೇ ಮೇ 3ರಂದು ಮೈಸೂರಿನ ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರತಿಭಟನೆಯಲ್ಲಿ ಎಲ್ಲರೂ ಭಾಗಿಯಾಗಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಇತಿಹಾಸ ನೆನಪುಗಳನ್ನು ಜೀವಂತವಾಗಿರಿಸುತ್ತದೆ : ಎಲ್. ಎನ್. ಮುಕುಂದರಾಜ್
ಸಭೆಯಲ್ಲಿ ಧರ್ಮ ಗುರುಗಳಾದ ಮುಫ್ತಿ ತಾಜುದ್ದಿನ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ದಸಂಸ ಮುಖಂಡರಾದ ಮಲ್ಲಳ್ಳಿ ನಾರಾಯಣ, ಬಂಗವಾದಿ ನಾರಾಯಣ, ಉಪ್ಪಾರ ಸಂಘದ ಯೋಗೇಶ್, ಎಂ ಎಫ್ ಕಲೀಮ್, ಮೌಲಾನ ಜಕ್ಕವುಲ್ಲಾ, ಫಾರೂಕ್ ನಸ್ಟರ್, ರಫಿವುಲ್ಲಾ, ಇಬ್ರಾಹಿಂ ಶೇಟ್, ಶಬ್ಬೀರ್ ಅಹಮದ್, ನಟರಾಜ್, ಪತ್ರಕರ್ತ ಮೋಹನ್ ಮೈಸೂರು, ಜಮಾಆತೆ ಇಸ್ಲಾಮಿ ಹಿಂದ್‌ನ ಅಸಾದುಲ್ಲಾ ಸೇರಿದಂತೆ ಇತರರು ಇದ್ದರು.