ಕಲುಷಿತ ನೀರು ಕುಡಿದು 6 ಮಕ್ಕಳು ಸೇರಿದಂತೆ 18 ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಎಕಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕ್ಯಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡ ಕಾರಣ ತೆರೆದ ಬಾವಿಯ ನೀರು ಸೇವಿಸಿದ್ದರಿಂದ ವಾಟರ್ ಮ್ಯಾನ್ ಸೇರಿದಂತೆ 18 ಮಂದಿ ಜನ ಅಸ್ವಸ್ಥರಾಗಿದ್ದಾರೆ.
ಅಮೃತಾ, ಸಾಕ್ಷಿ, ಜಯಶಂಕರ್, ದಿವ್ಯಾ, ಗಾಯಿತ್ರಿ ಹಾಗೂ ಕಾರ್ತಿಕ ಎಂಬ ಆರು ಮಕ್ಕಳು ಅಸ್ವಸ್ಥರಾಗಿದ್ದಾರೆ. ವಾಂತಿ ಭೇದಿ, ಹೊಟ್ಟೆ ನೋವು ಹಿನ್ನೆಲೆ ಎಲ್ಲರನ್ನು ಔರಾದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಜಿ.ಪಂ ಸಿಇಒ ಶಿಲ್ಪಾ ಎಂ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.
ಚರಂಡಿ ಮೇಲೆ ಕುಡಿಯುವ ನೀರಿನ ಬಾವಿ ಇದ್ದು, ಕಲುಷಿತಗೊಂಡ ನೀರು ಕುಡಿದ ಕಾರಣ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಇನ್ನೂ ಗ್ರಾಮದಲ್ಲಿ ಹಲವರಿಗೆ ವಾಂತಿ ಭೇದಿ ಶುರುವಾಗಿದೆ, ಗ್ರಾಮದಲ್ಲಿ ಅಂಬುಲೆನ್ಸ್ ಬಂದಿದೆ. ಅಸ್ವಸ್ಥರಾಗಿದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರೊಬ್ಬರು ಈದಿನ.ಕಾಮ್ ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಿಮ್ಸ್ ನಿರ್ದೇಶಕನ ಅಮಾನತಿಗೆ ಆಗ್ರಹ; ದಸಂಸ ಧರಣಿ