ಮೀಟರ್‌ಗಳ ಬೆಲೆ ಏರಿಕೆ, ನೀರಾವರಿ ಪಂಪ್‌ಸೆಟ್‌ಗಳಿಗೆ ಮೂಲಸೌಲಭ್ಯ ಕಲ್ಪಿಸಲು ಹೆಚ್ಚಿನ ಬೆಲೆ ನಿಗದಿ ಮಾಡಿರುವುದು, ಗುತ್ತಿಗೆದಾರರ ಪರವಾನಗಿ ದರ ಹೆಚ್ಚಳ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ವಿವಿಧ ಸೌಲಭ್ಯಗಳ ಬೆಲೆ ಏರಿಕೆಯನ್ನು ಖಂಡಿಸಿ ಫೆ.24ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ಬಾಬು ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾವಿರ ರೂಪಾಯಿಯ ಮಾಪಕವನ್ನು ಏಕಾಏಕಿ 4998ರೂ., 2500 ರೂಪಾಯಿಯ ಮಾಪಕದ ಬೆಲೆಯನ್ನು 8800ರೂ. ಮತ್ತು 3500 ರೂ. ಇದ್ದ ಮಾಪಕದ ಬೆಲೆಯನ್ನು 28080 ರೂಪಾಯಿಗೆ ಏಕಾಏಕಿ ಬೆಲೆ ಏರಿಕೆ ಮಾಡಿದ್ದು, ಸರ್ಕಾರ ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ಕೂಡಲೇ ಈ ನೀತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಪರಿವೀಕ್ಷಣಾಲಯದಿಂದ ಗುತ್ತಿಗೆದಾರರ ಪರವಾನಗಿ ಪಡೆಯಲು ಈ ಹಿಂದೆ ಪ್ರಥಮ ದರ್ಜೆ ಪರವಾನಗಿಗೆ 3000 ರೂ. ಇತ್ತು, ಇದೀಗ 10000ಕ್ಕೆ ಏರಿಸಲಾಗಿದೆ. ಸೂಪರ್ ಗ್ರೇಡ್ ಪರವಾನಗಿ ದರವನ್ನು 5000 ದಿಂದ 50000 ರೂ.ಗೆ ಏರಿಕೆ ಮಾಡಲಾಗಿದೆ. ಇದನ್ನು ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಗೋಪಾಲ್ ಮಾತನಾಡಿ, ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಈ ಹಿಂದೆ ಅಕ್ರಮಸಕ್ರಮ ಯೋಜನೆಯಡಿಯಲ್ಲಿ 30 ಸಾವಿರ ರೂ. ನಿಗದಿಯಾಗಿತ್ತು. ಆದರೆ, ಇದೀಗ ಇದ್ದಕ್ಕಿದ್ದಂತೆ 2 ಲಕ್ಷದಿಂದ 10 ಲಕ್ಷದವರೆಗೆ ಏರಿಕೆಯಾಗಿದ್ದು, ಇದರಿಂದ ರೈತರಿಗೆ ದೊಡ್ಡ ಹೊರೆಯಾಗಲಿದೆ ಎಂದು ಕಿಡಿಕಾರಿದರು.
ಸ್ವಯಂ ಕಾಮಗಾರಿಯಲ್ಲಿ ಅಳವಡಿಸಿರುವ 25 ಕೆವಿಎ ವಿದ್ಯುತ್ ಪರಿವರ್ತಕ ಚಾಲ್ತಿಗೆ ಸರ್ಕಾರ 3400 ರೂ.ಗಳಿಂದ 9500 ರೂ.ಗಳಿಗೆ ಏರಿಕೆ ಮಾಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಫೆ.24ರಂದು ವಿದ್ಯುತ್ ಗುತ್ತಿಗೆದಾರರ ಸಂಘ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಇದಕ್ಕೆ ರೈತ ಸಂಘ ಸಂಪೂರ್ಣ ಬೆಂಬಲ ನೀಡಲಿದೆ. ಈ ಮೂಲಕ ದರ ಪರಿಶೀಲನೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಬಿ – ಖಾತೆ ಅಭಿಯಾನಕ್ಕೆ ಶಾಸಕ ಪ್ರದೀಪ್ ಈಶ್ವರ್ ಚಾಲನೆ; ಮೊದಲ ದಿನ 716 ಅರ್ಜಿಗಳು ಸ್ವೀಕಾರ
ಸುದ್ದಿಗೋಷ್ಠಿಯಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆಂಜಿನಪ್ಪ, ಭೈರೆಡ್ಡಿ, ಮುನಿರಾಜು, ಬಸವರಾಜು, ಮಂಜುನಾಥ್, ಪ್ರಸಾದ್, ನವೀನ್ ಹಾಗೂ ರೈತ ಸಂಘದ ಮುಖಂಡರು ಹಾಜರಿದ್ದರು.