ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಎಲ್ಲೆಡೆ ಹೆಚ್ಚಾಗುತ್ತಿದ್ದು, ಮಹಿಳೆಯರ ಮೇಲೆ ಮಾನಸಿಕ ದೌರ್ಜನ್ಯ ಮಾಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್, ಸಂಘ ಸಂಸ್ಥೆಗಳಿಂದ ಹಾಗೂ ಇನ್ನಿತರ ಫೈನಾನ್ಸ್ ಕಂಪನಿಗಳಿಂದ ತೆಗೆದುಕೊಂಡ ಹಣವನ್ನು ವಾಪಸ್ ಮರುಪಾವತಿಸಲು ಒಂದೆರಡು ಬಾರಿ ಅವಕಾಶ ಕೊಡಬೇಕು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ( ಪಾವಗಡ ಶ್ರೀ ರಾಮ ಬಣ) ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
“ಪ್ರಸ್ತುತ ಮನೆಗಳಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು, ದುರ್ಘಟನೆಗಳು ನಡೆದಿರುತ್ತವೆ. ಇಂತಹ ಸಂದರ್ಭದಲ್ಲಿಯೂ ಫೈನಾನ್ಸ್‌ಗಳಿಂದ ನಿತ್ಯವೂ ಕಿರುಕುಳ ಹೆಚ್ಚಾಗುತ್ತಿದೆ. ಸಾಲ ವಾಪಸ್ ನೀಡುವುದಿಲ್ಲವೆಂದು ಹೇಳುವುದಿಲ್ಲ. ಸ್ವಲ್ಪ ಕಾಲಾವಕಾಶ ಕೊಡಬೇಕು” ಎಂದು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯಾದ್ಯಂತ ಕಿರುಸಾಲ ಪಡೆದ ಮಹಿಳೆಯರ ಮನೆಗೆ ನುಗ್ಗಿ ಸಮಯದ ಪ್ರಜ್ಞೆ ಇಲ್ಲದೆ ಮನೆಯಲ್ಲಿ ಧರಣಿ ಹೂಡಿದಂತೆ ಕುಳಿತುಕೊಂಡು ಹಣ ಕಟ್ಟುವಂತೆ ಒತ್ತಾಯಿಸುತ್ತಾರೆ. ಮನೆಯಂಗಳದಲ್ಲಿ, ಓಣಿಯಲ್ಲಿ ನಿಂತು ನಮ್ಮ ಮರ್ಯಾದೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ” ಎಂದು ಅಳಲು ತೋಡಿಕೊಂಡರು. ಹಣ ಕಟ್ಟಲು ಕಾಲಾವಕಾಶ ಕೋರಿದರೂ ಕೂಡ ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ ಎಂದು ಹೇಳಿದರು.
ಸಾಲ ಪಡೆದ ಮಹಿಳೆಯರಿಗೆ ನೆಮ್ಮದಿಯಿಲ್ಲದಂತಾಗಿದೆ. ಕೆಲವು ಸೂಕ್ಷ್ಮ ಮತಿಯ ಹೆಣ್ಣು ಮಕ್ಕಳು ಇವರ ಕಿರಿಕಿರಿಯಿಂದಾಗಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟರೆ ಇದಕ್ಕೆ ನೇರ ಹೊಣೆಗಾರರು ಮೈಕ್ರೋ ಫೈನಾನ್ಸ್ ಕಂಪನಿಗಳೇ ಆಗುತ್ತವೆ ಎಂದು ಕಿಡಿಕಾರಿದರು.
ಸರಕಾರದ ಸುತ್ತೋಲೆ ಮೂಲಕ ಕೊಟ್ಟಿರುವ ಸಾಲಗಳಿಗೆ ಒತ್ತಾಯ ಪೂರ್ವಕವಾಗಿ ಹಣ ಕಟ್ಟುವಂತೆ ಪೀಡಿಸಬಾರದು. ಒಂದೆರಡು ಬಾರಿ ಕಾಲಾವಕಾಶ ಕೊಡಬೇಕು ಎಂದು ಸಂಘಟನೆಯಿಂದ ಮನವಿ ಮಾಡಿದರು.
ಈ ವೇಳೆ ರಾಜ್ಯಾಧ್ಯಕ್ಷರು ಹೇಮರಾಜ್ ಅಸ್ಕಿಹಾಳ, ಜಿಲ್ಲಾಧ್ಯಕ್ಷ ನರಸಿಂಹಲು , ಪ್ರಭು ಮರ್ಚಟ್ಹಾಲ , ನರಸಿಂಹಲು ಪೋತಗಲ್ , ಉರುಕುಂದಪ್ಪ , ತಾಯಣ್ಣ ಗದಾರ , ಲಿಂಗಣ್ಣ ಮಾಡಗಿರಿ , ಎನ್ ಸುನೀಲ್ , ಸಿ ರಾಘವೇಂದ್ರ , ಪ್ರವೀಣ ಕುಮಾರ , ಇನ್ನಿತರರು ಹಾಜರಿದ್ದರು.
