ಕೊಡಗು ವಿಶ್ವವಿದ್ಯಾನಿಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಮಹಾ ವಿದ್ಯಾಲಯದ ಅಮೃತ ಮಹೋತ್ಸವದ ಪ್ರಯುಕ್ತ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಭೋಸರಾಜು ಚಾಲನೆ ನೀಡಿದರು.
ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ” ಮಾನವನ ಬದುಕಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಊಹಿಸಿಕೊಳ್ಳುವುದು ಕಷ್ಟಸಾಧ್ಯ.ಸರ್ವರಿಗೂ ಸುಲಭ ವಿಜ್ಞಾನ, ಸುಸ್ಥಿರ ಅಭಿವೃದ್ದಿಯ ಆಶಯದೊಂದಿಗೆ ನಾಡಿನಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ವಿಜ್ಞಾನವನ್ನು ಜನಪ್ರಿಯಗೊಳಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
” ಭೂಮೇಲ್ಮೈ, ವಾತಾವರಣದಲ್ಲಿ ಮಳೆ,ಗಾಳಿ ಬಿಸಿಲು, ಚಳಿ, ಭೂಕಂಪ ಸೇರಿದಂತೆ ಪ್ರಾಕೃತಿಕವಾಗಿ ನಿತ್ಯದ ಚಟುವಟಿಕೆಯನ್ನು ಮುಂಚಿತವಾಗಿಯೇ ತಿಳಿಯುವಂತಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯವಶ್ಯಕವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಕುತೂಹಲ ಇರಬೇಕು. ಇದರಿಂದ, ವೈಜ್ಞಾನಿಕವಾಗಿ ಸಂಶೋಧನೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿಯೇ ಮಾಹಿತಿ ದೊರೆಯುತ್ತಿದ್ದು, ಇದನ್ನು ಹೆಚ್ಚು ಬಳಸಬೇಕು. ಇದರಿಂದ ಹಂತ ಹಂತವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ” ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ಮಾತನಾಡಿ ” ಕನ್ನಡದಲ್ಲಿಯೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಮಾನವನ ಬೆಳವಣಿಗೆಗೆ ಅತ್ಯವಶ್ಯಕ. ತಂತ್ರಜ್ಞಾನವು ವಿಶ್ವದಲ್ಲಿ ಅಗಾಧವಾಗಿ ಬೆಳೆದಿದೆ. ಅಮೇರಿಕಾದ ಬಾಹ್ಯಾಕಾಶ ವಿಜ್ಞಾನಿಗಳು 9 ತಿಂಗಳ ಕಾಲ ಅಂತರಾಷ್ಟ್ರೀಯ ಗಗನಯಾನದಲ್ಲಿ ಇದ್ದು, ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಸಂಶೋಧನೆ ಕೈಗೊಂಡು ಭೂಮಿಗೆ ವಾಪಸ್ಸು ಬಂದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು. ಒಳ್ಳೆಯದನ್ನು ಸರಿಯಾಗಿ ಬಳಸಿಕೊಂಡು ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ” ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಮಾತನಾಡಿ ” ನಾಡಿನ ಭಾಷೆ ಹಾಗೂ ಮಾತೃ ಭಾಷೆ ಕನ್ನಡವಾಗಿದ್ದು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಬೇಕು. ಕನ್ನಡ ಆಡಳಿತ ಭಾಷೆಯಾಗಿದ್ದು, ಸಂಬಂಧಗಳ ಆಧಾರದಲ್ಲಿ ನಾಡನ್ನು ಕಟ್ಟಲಾಗಿದೆ. ಸಂಸ್ಕೃತಿ ಭಾವೈಕ್ಯತೆಯ ಬೀಡು ಕರ್ನಾಟಕವಾಗಿದೆ. ಸಂಬಂಧಗಳು ಗಟ್ಟಿಯಾಗಿರಬೇಕು, ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಮಕ್ಕಳಿಗೆ ಜೀವನ ಮತ್ತು ಬದುಕಿನ ಶಿಕ್ಷಣ ಕಲಿಸಬೇಕು. ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮಗಾಂಧಿ, ಕುವೆಂಪು, ಪುರಂದರ ದಾಸರು, ಕನಕದಾಸರು, ನಾರಾಯಣ ಗುರು ಹೀಗೆ ಹಲವು ದಾರ್ಶನಿಕರ ಬಗ್ಗೆ ಅರಿತು
ಸಮಾಜದಲ್ಲಿ ಮುನ್ನಡೆಯಬೇಕು ” ಎಂದರು.
ವಿಧಾನ ಪರಿಷತ್ ಸದಸ್ಯ ಎಂ ಪಿ ಸುಜಾ ಕುಶಾಲಪ್ಪ ಮಾತನಾಡಿ ‘ ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವ ಜೀವನದ ಅಭಿವೃದ್ದಿಗೆ ಸಹಕಾರಿಯಾಗಿದೆ. ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ ” ಎಂದರು.
ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಮಾತನಾಡಿ ‘ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವುದು. ಆಧುನಿಕ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡುವುದು ಪ್ರಮುಖ ಉದ್ದೇಶವಾಗಿದೆ ‘ಎಂದರು.
ವಿಶ್ವ ವಿದ್ಯಾಲಯಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಎ ಎಂ ರಮೇಶ್ ‘ ಮಾತನಾಡಿ ಇದುವರೆಗೆ 50 ಸಮ್ಮೇಳನವನ್ನು ಆಯೋಜಿಸಲಾಗಿದೆ. ವಿವಿಧ ಉಪನ್ಯಾಸ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 30 ಕ್ಕೂ ಹೆಚ್ಚು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಕನ್ನಡದಲ್ಲಿಯೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಆಯೋಜಿಸಿರುವುದು ವಿಶೇಷವಾಗಿದೆ ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಏ. 5 ಮತ್ತು 6 ರಂದು ‘ ಮಾನವ ಮೈತ್ರಿ ಬೌದ್ಧ ಸಮ್ಮೇಳನ ‘
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ ಸುರೇಶ ಎಚ್ ಜಂಗಮಶೆಟ್ಟಿ, ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ ತರೀಕೆರೆ ಸಿ ತಾರಾನಾಥ್, ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಡಾ ಎಂ ಆರ್ ಗಂಗಾಧರ್, ಬಾಗಲಕೋಟೆ ವಿಶ್ವ ವಿದ್ಯಾಲಯದ ಕುಲಪತಿ ಡಾ ಆನಂದ ಎಸ್. ದೇಶಪಾಂಡೆ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ ಬಿ ಕೆ ರವಿ, ಬೀದರ ವಿಶ್ವವಿದ್ಯಾಲಯದ ಕುಲಪತಿ ಡಾ ಬಿ ಎಸ್ ಬಿರಾದಾರ್, ಬೆಂಗಳೂರು ಕವಿತಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಎ ಎಂ ರಮೇಶ್, ಎಫ್‍ಎಂಕೆಎಂಸಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಬಿ ರಾಘವ, ಸಿಂಡಿಕೇಟ್ ಸದಸ್ಯ ಪುಟ್ಟರಾಜಪ್ಪ, ಡಾ ವಾಣಿ ಎಂ, ಕೆ ಎನ್ ಜನಾರ್ಧನ್, ಡಾ ದಯಾನಂದ ಕೆ ಸಿ, ಡಾ ಎಂ ಜಿ ಕಾವೇರಿಯಪ್ಪ, ಡಾ ಡಿ ಕೆ ಸರಸ್ವತಿ, ಕುಲಸಚಿವ ಡಾ ಎಂ ಸುರೇಶ ಸೇರಿದಂತೆ ಇನ್ನಿತರರು ಇದ್ದರು.