ರಾಜ್ಯ ಸರ್ಕಾರ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬರ ನಿರ್ವಹಿಸಲು ಅನುದಾನ ಹಂಚಿಕೆ ಮಾಡಿದೆ. ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಅನುದಾನವನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಸೂಚಿಸಿದರು.
ತುಮಕೂರಿನ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಶುಕ್ರವಾರ ನಡೆದ 2023-24 ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ 226 ತಾಲೂಕುಗಳ ಪೈಕಿ 232 ತಾಲೂಕುಗಳಲ್ಲಿ ತೀವ್ರ ಬರ ತಲೆದೋರಿದೆ. ಕಂದಾಯ ಇಲಾಖೆಯು 37 ಸಾವಿರ ಕೋಟಿ ನಷ್ಟವನ್ನು ಅಂದಾಜು ಮಾಡಿದೆ. ಈ ಪೈಕಿ 17 ಸಾವಿರ ಕೋಟಿ ರೂ.ಗಳ ಅನುದಾನವನ್ನು ಬರನಿರ್ವಹಣೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈವರೆಗೂ ಅನುದಾನ ಬಂದಿಲ್ಲ. ಆದರೆ ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಅನುದಾನ ಬಿಡುಗಡೆ ಮಾಡಿದ್ದು, ಇದನ್ನು ಬರ ಕಾಮಗಾರಿಗಳಿಗೆ ಉಪಯೋಗಿಸಲು ಸರ್ಕಾರ ಒಪ್ಪಿಗೆ ನೀಡಿದೆ” ಎಂದು ತಿಳಿಸಿದರು.
ಕೃಷಿ ಇಲಾಖೆಯ ಪ್ರಗತಿ ಪರಿಶೀಲಿಸಿ ಮಾತನಾಡಿದ ಸಚಿವರು, ನೀರಿನ ಸದ್ಭಳಕೆಗಾಗಿ ಸರ್ಕಾರದ ಸಹಾಯಧನದಡಿ ಜಿಲ್ಲೆಯ 18 ಸಾವಿರ ರೈತರಿಗೆ ಒಟ್ಟು ೪೬ ಕೋಟಿ ರೂ.ಗಳ ತುಂತುರು ನೀರಾವರಿ ಘಟಕಗಳನ್ನು ಈ ತಿಂಗಳೊಳಗಾಗಿ ವಿತರಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಕೊರತೆ ಇರುವಂತಹ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಶಾಸಕರ ನೇತೃತ್ವದ ಟಾಸ್ಕಪೋರ್ಸ್ ಸಮಿತಿಯು ಸಭೆ ಕರೆದು ಚರ್ಚಿಸಿ ಕೊಳವೆ ಬಾವಿ ಕೊರೆಸುವುದಕ್ಕೆ ಪ್ರಸ್ತಾವನೆ ಕಳುಹಿಸಿದಲ್ಲಿ ಜಿಲ್ಲಾಡಳಿತ ವತಿಯಿಂದ ತ್ವರಿತಗತಿಯಲ್ಲಿ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
ಶುದ್ಧ ನೀರಿನ ಘಟಕಗಳ ನಿರ್ವಹಣೆ ಸಂಬಂಧಿಸಿದಂತೆ ತ್ರಿಸದಸ್ಯರುಳ್ಳ ಟಾಸ್ಕಪೋರ್ಸ್ ಸಮಿತಿಯನ್ನು ರಚಿಸಬೇಕು ಮತ್ತು ಪ್ರತಿ 2 ದಿನಗಳಿಗೊಮ್ಮೆ ಇಓ ಮತ್ತು ಪಿಡಿಓಗಳು ಕುಡಿಯುವ ನೀರಿನ ವಸ್ತುಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಓ ಅವರಿಗೆ ವರದಿ ನೀಡಬೇಕು. ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂದು ಸಚಿವರು ಸೂಚಿಸಿದರು.
ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 16 ಕೋಟಿ ಮಾನವ ದಿನಗಳ ಗುರಿ ನೀಡಲಾಗಿದ್ದು, ಈ ಪೈಕಿ 13 ಕೋಟಿ ಮಾನವ ದಿನಗಳನ್ನು ಈಗಾಗಲೇ ಸೃಜಿಸಲಾಗಿದೆ. ಹೆಚ್ಚುವರಿಯಾಗಿ 28 ಕೋಟಿ ರೂ.ಗಳ ಮಾನವ ದಿನಗಳ ಗುರಿ ಒದಗಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ನರೇಗಾ ಹಾಗೂ ಸಿಎಸ್‌ಆರ್ ಯೋಜನೆಯಡಿ ಈಗಾಗಲೇ ಜಿಲ್ಲೆಯ ಹಲವು ಶಾಲೆಗಳಿಗೆ ಸಿಂಥೆಟಿಕ್ ಟ್ರಾಕ್, ಶೌಚಾಲಯ, ಅಂಗನವಾಡಿಗಳಿಗೆ ಕಾಂಪೌಂಡ್ ಮುಂತಾದವುಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು 2 ವರ್ಷದೊಳಗಾಗಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಶೌಚಾಲಯ, ಕಾಂಪೌಂಡ್, ಅಂಗನವಾಡಿ ಕಟ್ಟಡಗಳಿಗೆ ಕಾಂಪೌಂಡ್ ಮುಂತಾದ ಕೆಲಸಗಳನ್ನು ನರೇಗಾ ಹಾಗೂ ಸಿಎಸ್‌ಆರ್ ಯೋಜನೆಯಡಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ರಾಷ್ಟ್ರದಲ್ಲಿಯೇ ಮೊದಲನೆಯದು ಎನ್ನುವ ವಿನೂತನ ಕಾರ್ಯಕ್ರಮ “ಸಮಗ್ರ ತುಮಕೂರು ಆರೋಗ್ಯ ಅಭಿಯಾನ”ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದಡಿ ಗ್ರಾಮಗಳ ಪ್ರತಿ ಮನೆಗೆ ವೈದ್ಯರುಗಳು ತೆರಳಿ 12 ಮಾನದಂಡಗಳನ್ನು ಅನುಸರಿಸಿ ಕುಟುಂಬದ ಪ್ರತಿ ಸದಸ್ಯರ ಆರೋಗ್ಯ ಮಾಹಿತಿಯನ್ನು ಕಲೆ ಹಾಕಿ ದಾಖಲೀಕರಣ ಮಾಡಲಿದ್ದಾರೆ. ಈ ದಾಖಲೆಗಳಿಗನುಗುಣವಾಗಿ ರೋಗಿಗೆ ಚಿಕಿತ್ಸೆಗೆ ಅನುಕೂಲ ಮಾಡಲಾಗುವುದು. ಮುಂದಿನ 60 ದಿನಗಳಲ್ಲಿ 18 ಲಕ್ಷ ಜನರ ತಪಾಸಣೆಯ ಗುರಿಯೊಂದಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ವೈದ್ಯರುಗಳು ಮತ್ತು ಇತರೆ ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ಸಿಗುವುದಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಸಚಿವರು, ಇನ್ನು ಮುಂದೆ ಡಿಹೆಚ್‌ಓ ತಿಂಗಳಿಗೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು. ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಹಾಜರಾತಿಗೆ ಸಂಬಂಧಿಸಿದಂತೆ ತಂತ್ರಜ್ಞಾನ ಬಳಸಿ ವೈದ್ಯರ ಲಭ್ಯತೆ ಕುರಿತು ಪರಿಶೀಲಿಸಬೇಕು. ಪ್ರತಿ ಪಿಹೆಚ್‌ಸಿಯಲ್ಲಿ ಒಂದು ರಿಜಿಸ್ಟರ್ ಇಡಬೇಕು ಮತ್ತು ಆಸ್ಪತ್ರೆಗೆ ಭೇಟಿ ನೀಡಿದಂತಹ ಅಧಿಕಾರಿಗಳು ರಿಜಿಸ್ಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ನಮೂದಿಸಬೇಕೆಂದು ಸೂಚಿಸಿದರು.
ಹೇಮಾವತಿ ನೀರನ್ನು ಸಮರ್ಪಕವಾಗಿ ಜಿಲ್ಲೆಗೆ ಹರಿಸುವ ಸಂಬಂಧ ಸಭೆಯಲ್ಲಿ ಉಪಸ್ಥಿತರಿದ್ದಂತಹ ಶಾಸಕರುಗಳ ಮನವಿಗೆ ಸ್ಪಂದಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ಸಧ್ಯದಲ್ಲೇ ಈ ಕುರಿತಂತೆ ಐಸಿಸಿ ಸಭೆಯನ್ನು ಕರೆಯಲಿದ್ದು, ಸಭೆಯಲ್ಲಿ ಜಿಲ್ಲೆಯ ಶಾಸಕರೆಲ್ಲರೂ ಸೇರಿ ಹೇಮಾವತಿ ನೀರಿನ ಹಂಚಿಕೆ ಕುರಿತು ಚರ್ಚಿಸಿ ತೀರ್ಮಾನಿಸೋಣ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಸಚಿವ ರಾಜಣ್ಣ ಅವರು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೆರೆ ನೀರಿನ ಮೇಲೆ ಅವಲಂಬಿತವಾಗಿರುವ ಹಳ್ಳಿಗಳನ್ನು ಗುರುತಿಸಿ, ಅಂತಹ ಕೆರೆಗಳಿಗೆ ಆಧ್ಯತೆ ಮೇರೆಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಆರ್‌ಓ ಘಟಕಗಳ ಕುರಿತಂತೆ ಮಾತನಾಡಿದ ಸಚಿವ ರಾಜಣ್ಣ ಅವರು, ಆರ್‌ಓ ಘಟಕಗಳು ಸುಸ್ಥಿತಿಯಲ್ಲಿವೆ ಎಂದು ದಾಖಲೆಗಳು ಹೇಳುತ್ತವೆ. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ. ಏಜೆನ್ಸಿಗಳು ಕೇವಲ ಘಟಕದ “ಮೆಂಬ್ರೇನ್” ದುರಸ್ಥಿಪಡಿಸುವುದಕ್ಕೆ ಮಾತ್ರ ಸೀಮಿತವಾಗಿವೆ. ಗ್ರಾಮಪಂಚಾಯತಿಗಳಿಗೆ ಆರ್‌ಓ ಘಟಕಗಳನ್ನು ಹಸ್ತಾಂತರಿಸಬೇಕು. ಈ ಕುರಿತಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚನೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದಂತಹ ಕೆ.ಶ್ರೀನಿವಾಸ್ ಅವರು ವಿಪತ್ತು ನಿರ್ವಹಣೆ ಬಗ್ಗೆ ಸಭೆಗೆ ಸಮಗ್ರ ಮಾಹಿತಿ ನೀಡುತ್ತಾ, ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಈಗಾಗಲೇ ಟಾಸ್ಕಪೋರ್ಸ್ಗಳನ್ನು ರಚಿಸಲಾಗಿದೆ. ಕುಡಿಯುವ ನೀರು ಮತ್ತು ಮೇವಿಗೆ ಆಧ್ಯತೆ ನೀಡಿ ಕ್ರಮಕೈಗೊಳ್ಳಲಾಗಿದೆ. ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಪ್ರತಿ ಗ್ರಾಮಪಂಚಾಯತಿಗಳಿಗೆ ಸಧ್ಯದಲ್ಲೇ ಮೇವಿನ ಕಿಟ್‌ಗಳನ್ನು ಒದಗಿಸಲಾಗುವುದು. ಜಿಲ್ಲೆಯಿಂದ ಮೇವು ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ ಮತ್ತು ಬರ ನಿರ್ವಹಣೆ ಸಂಬಂಧ ಈಗಾಗಲೇ ಸಹಾಯವಾಣಿಯನ್ನು ತೆರೆದು ರೈತಾಪಿ ವರ್ಗದವರಿಗೆ ಈ ಕುರಿತಂತೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸದರಾದ ಜಿ.ಎಸ್. ಬಸವರಾಜು, ಶಾಸಕರುಗಳಾದ ಸುರೇಶ್ ಬಾಬು, ರಾಜೇಂದ್ರ, ತಿಪ್ಪೇಸ್ವಾಮಿ, ಎಂ.ಟಿ.ಕೃಷ್ಣಪ್ಪ, ಚಿದಾನಂದಗೌಡ, ಷಡಾಕ್ಷರಿ, ರಂಗನಾಥ್, ಸುರೇಶ್ ಗೌಡ, ಜ್ಯೋತಿಗಣೇಶ್, ಮೇಯರ್ ಪ್ರಭಾವತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿ.ಪಂ. ಸಿಇಓ ಜಿ.ಪ್ರಭು, ಪಾಲಿಕೆ ಆಯುಕ್ತೆ ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.