ರಾಜ್ಯದ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಯೋಜನೆ/ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರ, ಪ್ರಚಾರಕಾರ್ಯ, ಜಾಗೃತಿ ಜಾಥಾಗಳನ್ನು ನಡೆಸಲು ಹಾಗೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 6.9 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಈ ಒಟ್ಟು ಹಣವನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆಯ ನಿರ್ದೇಶಕ ಎಲ್ ಶ್ರೀನಿವಾಸ ಅವರು ತಮ್ಮ ಆಪ್ತ ಬಲರಾಮ ಎಂಬವರ ‘ಬುದಾನ ಟ್ರಸ್ಟ್’ಗೆ MCA ಮೂಲಕ ನೀಡಿದ್ದಾರೆ. ಎಲ್ಲ ಹಣವನ್ನು ಓರ್ವ ವ್ಯಕ್ತಿಗೆ ನೀಡಿರುವುದು ದುರ್ಬಳಕೆಯ ಉದ್ದೇಶವಾಗಿದೆ ಎಂದು ಆದಿವಾಸಿ, ಬುಡಕಟ್ಟು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.
“ಪರಿಶಿಷ್ಟ ಪಂಗಡಕ್ಕೆ ಒಳಪಡುವ ಆದಿವಾಸಿಗಳು ಇಂದಿಗೂ ಕನಿಷ್ಠ ಮೂಲಭೂತ ದಾಖಲೆಗಳನ್ನು ಹೊಂದಿಲ್ಲ. ಆ ಕಾರಣದಿಂದಾಗಿ, ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದನ್ನರಿತ ಸರ್ಕಾರ ಸಮುದಾಯಗಳ ಜನರಿಗೆ ಮೂಲಭೂತ ದಾಖಲೆಗಳನ್ನು ಮಾಡಿಕೊಡಲು, ಸಮುದಾಯಗಳಿಗಾಗಿ ಜಾರಿಯಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಣ ಬಿಡುಗಡೆ ಮಾಡಿದೆ. ಆದರೆ, ಕೆಲವು ಅಧಿಕಾರಿಗಳು ತಮ್ಮ ಆಪ್ತರಿಗೆ ಹಣ ನೀಡುವ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ದೂರಿದ್ದಾರೆ.
“ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆಯು ಆದಿವಾಸಿ, ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಸಂಶೋಧನೆ, ತರಬೇತಿ, ಮೌಲ್ಯಮಾಪನ, ಕುಲಶಾಸ್ತ್ರೀಯ ಅಧ್ಯಯನ, ಅರಿವುಮುಡಿಸುವಕಾರ್ಯಕ್ರಮಗಳು, ಸಾಕ್ಷಾಚಿತ್ರ ನಿರ್ಮಾಣ, ಗ್ರಂಥಾಲಯ ಮತ್ತು ಬುಡಕಟ್ಟು ವಸ್ತುಸಂಗ್ರಹಾಲಯ ಸ್ಥಾಪನೆಯ ಉದ್ದೇಶವನ್ನು ಹೊಂದಿದೆ. ಈ ಎಲ್ಲ ಉದ್ದೇಶಕ್ಕಾಗಿ, ಸಂಸ್ಥೆಯ ಕಚೇರಿಯನ್ನು ಬುಡಕಟ್ಟುಗಳೇ ಹೆಚ್ಚಾಗಿರುವ ಜಿಲ್ಲೆ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ಮೇಲಿನ ಕಾರ್ಯಕ್ರಮಗಳನ್ನು ಸಂಸ್ಥೆಯಿಂದಲೇ ನಡೆಸಬೇಕೆಂಬುದು ಸರ್ಕಾರ ಆದೇಶ ಮತ್ತು ನಿರ್ದೇಶನವನ್ನೂ ನೀಡಿದೆ. ಆದರೆ, ಕೇವಲ ಕಮಿಷನ್ ಹೊಡೆಯುವ ಉದ್ದೇಶದಿಂದ MCA ಮೂಲಕ ಈ ಕಾರ್ಯಕ್ರಮಗಳನ್ನು ‘ಬುದಾನ ಟ್ರಸ್ಟ್’ ಎಂಬ ಖಾಸಗಿ ಸಂಸ್ಥೆಗೆ ನೀಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಕಳೆದ ವರ್ಷವೂ ಹಲವಾರು ಕಾರ್ಯಕ್ರಮಗಳನ್ನು ಇದೇ ಬುದಾನ ಟ್ರಸ್ಟ್‌ಗೆ ನೀಡಲಾಗಿತ್ತು. ಆದರೆ, ಯಾವುದೇ ಕಾರ್ಯಕ್ರಮಗಳನ್ನು ಸರಿಯಾಗಿ ಮಾಡದೆ, ಸಂಸ್ಥೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆದರೆ ಅವರ ಅವ್ಯವಹಾರ ಹೊರಬರುತ್ತದೆ. ಇನ್ನೂ KMC&A ಮೂಲಕ ಫೋಟೋ ಗ್ಯಾಲರಿಯನ್ನು ಸುಮಾರು 1 ಕೋಟಿ ವ್ಯಚ್ಚದಲ್ಲಿ ಮಾಡಲಾಗಿದೆ. ಆದರೆ, ಗ್ಯಾಲರಿಗೆ ಉತ್ತಮ ಕ್ವಾಲಿಟಿಯ ಫೋಟೋಗಳನ್ನು ನೀಡಲಾಗಿಲ್ಲ. ಕರ್ನಾಟಕದ ಬುಡಕಟ್ಟುಗಳ ಪ್ರತಿ ಹಾಡಿಗಳಿಗೂ ಹೋಗಿ ಅವರ ಆಚಾರ, ವಿಚಾರ, ಕಲೆ ಸಂಸ್ಕೃತಿಯನ್ನು ಬಿಂಬಿಸುವ ಫೋಟೋಗಳನ್ನು ನೀಡುತ್ತೇವೆಂದು ಒಪ್ಪಂದದಲ್ಲಿ ಹೇಳಿದ್ದ ಟ್ರಸ್ಟ್, ಇಂಟರ್‌ನೆಟ್‌ನಲ್ಲಿ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ಮಾಡಿಸಿದೆ” ಎಂದು ದೂರಿದ್ದಾರೆ.
“ಸಂಸ್ಥೆಯ ನಿರ್ದೇಶಕರಾಗಿರುವ ಎಲ್ ಶ್ರೀನಿವಾಸ ಅವರಿಗೆ ಆದಿವಾಸಿ ಬುಡಕಟ್ಟು ಸಮುದಾಯಗಳ ಬಗ್ಗೆ ಕಿಂಚಿತ್ತು ಅರಿವಿಲ್ಲ. ಆಡಳಿತ ಜ್ಞಾನವೂ ಇಲ್ಲ. ಅವರನ್ನು ನಿರ್ದೇಶಕ ಹುದ್ದೆಯಿಂದ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೇ ಆದೇಶಿಸಿದ್ದರು. ಆದರೆ, ಸರ್ಕಾರದ ಆದೇಶದ ವಿರುದ್ದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರೆದ್ದಾರೆ. ಅವರನ್ನು ಹುದ್ದೆಯಿಂದ ಕಿತ್ತೊಗೆಯಬೇಕು. ಈ ಅನುದಾನದ ಬಳಕೆಯ ಬಗ್ಗೆ ತನಿಖೆ ನಡೆಸಬೇಕು. ಅರಿವು ಕಾರ್ಯಕ್ರಮಗಳನ್ನು ನಡೆಸಲು KTTP ಆಕ್ಟ್ ಪ್ರಕಾರ ಟೆಂಡರ್ ಕರೆದು, ಗುತ್ತಿಗೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.