ಶಾಸಕ ಯು ಟಿ ಖಾದರ್ ಅವರು ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಹಾಕಿದ್ದ ಫ್ಲೆಕ್ಸ್‌ಗಳ ಮೇಲೆ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಕಳೆದ ಭಾನುವಾರ ಉಳ್ಳಾಲದ ಮಹಾತ್ಮಗಾಂಧಿ ರಂಗ ಮಂದಿರದಲ್ಲಿ ಶಾಸಕರಿಗೆ ನಡೆದ ನಾಗರಿಕ ಸನ್ಮಾನಕ್ಕೆ ಶುಭ ಕೋರಿ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು.
ತೊಕ್ಕೊಟ್ಟು ಮೇಲ್ಸೇತುವೆಯಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗಿನ ರಸ್ತೆಯ ವಿಭಜಕ ಮತ್ತು ಇಕ್ಕೆಲಗಳಲ್ಲಿ ಫ್ಲೆಕ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ಹರಿದು ಹಾಕಲಾಗಿದೆ. ಫ್ಲೆಕ್ಸ್‌ಗಳನ್ನು ಸ್ಥಳೀಯ ನಗರಾಡಳಿತದಿಂದ ಅನುಮತಿ ಪಡೆಯದೆ ಅಳವಡಿಸಿರುವುದರಿಂದ ಈವರೆಗೆ ಯಾರೂ ಠಾಣೆಗೆ ದೂರು ನೀಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದು ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಕೃತ್ಯ ಎಸಗಿರುವುದಾಗಿ ಮಾಹಿತಿ ಲಭಿಸಿದೆ.