ಬೆಂಗಳೂರು-ಹಾಸನ ಇಂಟರ್‌ಸಿಟಿ ರೈಲು ಸಂಚಾರ ವಿಸ್ತರಣೆಗೆ ಒತ್ತಾಯಿಸಿ ಶಾಸಕ ಸಿಮೆಂಟ್ ಮಂಜು ಅವರು ಬೆಂಗಳೂರಿನಲ್ಲಿರುವ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದರು.
“ಬೆಂಗಳೂರು-ಹಾಸನ ನಡುವೆ ಸಂಚರಿಸುತ್ತಿರುವ ಇಂಟರ್‌ಸಿಟಿ ರೈಲನ್ನು ಸಕಲೇಶಪುರದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ಸಕಲೇಶಪುರ ಹಾಗೂ ಆಲೂರು ತಾಲೂಕಿನಿಂದ ನಿತ್ಯವೂ ನೂರಾರು ಜನ ವಿವಿಧ ಕಾರ್ಯಗಳಿಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ಕೆಲವರು ಹಾಸನದಿಂದ ರೈಲು ಮುಖಾಂತರ ಬೆಂಗಳೂರಿಗೆ ಹೋದರೆ ಕೆಲವರು ದುಬಾರಿ ಬಸ್ ದರ ತೆತ್ತು ಬೆಂಗಳೂರಿಗೆ ಹೋಗುತ್ತಿದ್ದಾರೆ. ಇಂಟರ್‌ಸಿಟಿ ರೈಲು ಸದ್ಯ ಬೆಂಗಳೂರು-ಹಾಸನ ನಡುವೆ ಸಂಚರಿಸುತ್ತಿದ್ದು, ಈ ರೈಲನ್ನು ಸಕಲೇಶಪುರದವರೆಗೂ ವಿಸ್ತರಿಸಿದರೆ ಸಕಲೇಶಪುರ ಹಾಗೂ ಆಲೂರು ತಾಲೂಕಿನ ಜನರು ನಿತ್ಯದ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಹೋಗಿ ಅಂದೇ ಹಿಂತಿರುಗಿ ಬರಲು ಅನುಕೂಲವಾಗುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ನಗರಾಭಿವೃದ್ಧಿಗಾಗಿ 200 ಕೋಟಿ ರೂ.ಗಳ ಅನುದಾನ : ಮಾದರಿ ನಗರ ನಿರ್ಮಾಣಕ್ಕೆ ಸಚಿವ ಜಿ. ಪರಮೇಶ್ವರ ಸೂಚನೆ
“ಆಸ್ಪತ್ರೆ, ಸರ್ಕಾರಿ ಕೆಲಸ, ವಿದ್ಯಾಭ್ಯಾಸ ಸೇರಿದಂತೆ ಇನ್ನು ಹಲವು ಅಗತ್ಯಗಳಿಗೆ ಆಗಾಗ ಬೆಂಗಳೂರಿಗೆ ಹೋಗಲೇ ಬೇಕಾಗುತ್ತದೆ. ಜೀವನೋಪಾಯಕ್ಕಾಗಿ ಈ ಭಾಗದ ಸಾವಿರಾರು ಜನ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಟರ್‌ಸಿಟಿ ರೈಲನ್ನು ವಿಸ್ತರಿಸಿದರೆ, ಸಕಲೇಶಪುರ ಹಾಗೂ ಆಲೂರು ತಾಲೂಕಿನ ಜನಕ್ಕೆ ಬಹಳ ಅನುಕೂಲವಾಗುತ್ತದೆ. ಆಲೂರು ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿದ ಸಚಿವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.