ಯಾದಗಿರಿಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರನ್ನು ರಾಜ್ಯ ಸರ್ಕಾರದ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಅವರಿಗೆ ಸಚಿವ ಸ್ಥಾನ ನೀಡಬೇಕು. ಇದರಿಂದ, ಕಾಂಗ್ರೆಸ್‌ಗೂ, ಕ್ಷೇತ್ರದ ಅಭಿವೃದ್ಧಿಗೂ ಒಳಿತಾಗುತ್ತದೆ ಎಂದು ಯಾದಗಿರಿ ಕಾಂಗ್ರೆಸ್ ಎಸ್‌ಸಿ ವಿಭಾಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕುರಕುಂದಾ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಮಲ್ಲು ಹಲಗಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಲ್ಲು ಹಲಗಿ, “ಕಳೆದ ನಾಲ್ಕು ದಶಕಗಳಿಂದಲೂ ಚೆನ್ನಾರೆಡ್ಡಿ ಪಾಟೀಲ್ ಅವರು ಕಾಂಗ್ರೆಸ್‌ನ ನಿಷ್ಠಾವಂತರಾಗಿ, ಪ್ರಾಮಾಣಿಕವಾಗಿ ಹಗಲಿರುಳು ದುಡಿದಿದ್ದಾರೆ. ಶಾಸಕರಾಗಿ ಬಡವರ, ರೈತರ ಹಾಗೂ ವಿದ್ಯಾರ್ಥಿಗಳ ಸಂಕಷ್ಟಗಳನ್ನು ಆಲಿಸಿ, ಪರಿಹಾರ ಒದಗಿಸಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ಸರ್ವ ಜನಾಂಗದ ಏಳಿಗೆಗಾಗಿ ಶ್ರಮಿಸಿದ್ದಾರೆ” ಎಂದು ವಿವರಿಸಿದ್ದಾರೆ.
“ಲೋಕಸಭಾ ಹಾಗೂ ಈಶಾನ್ಯ ಪದವಿಧರ ಅಭ್ಯರ್ಥಿಗಳ ಗೆಲುವಿಗೆ ಪಾಟೀಲ್ ಶ್ರಮಿಸಿದ್ದು, ಅನುಭವಿ ರಾಜಕಾರಣಿ ಆಗಿದ್ದಾರೆ. ಅವರ ಸೇವೆ ಮತ್ತು ಅನುಭವವನ್ನು ಗುರುತಿಸಿ, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ (ಡಿಸಿಎಂ) ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.