ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಸಹಯೋಗದಲ್ಲಿ ಕೊಡಗು ಜಿಲ್ಲೆ, ಕುಶಾಲನಗರ ಪಟ್ಟಣದ ಎಪಿಸಿಎಂಎಸ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ ಮಂತರ್ ಗೌಡ ಉದ್ಘಾಟಸಿ ‘ ಮಹಿಳೆ ಪ್ರೇರಣಾ ಶಕ್ತಿಯ ಪ್ರತೀಕ ‘ ಎಂದರು.
” ಮಹಿಳೆ ತ್ಯಾಗಮೂರ್ತಿಯಾಗಿದ್ದು ತನ್ನ ಇಡೀ ಬದುಕನ್ನು ಕುಟುಂಬಕ್ಕಾಗಿ ಮೀಸಲಿಡುವ ಶಕ್ತಿ, ಆಕೆಯ ಶ್ರಮ, ಜವಾಬ್ದಾರಿ, ಸಂಸಾರ ನಿಭಾಯಿಸುವ ಶಕ್ತಿ ಮಹಿಳೆಗಿದೆ. ಪ್ರತಿಯೊಬ್ಬ ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ ಮೂಡಿಸುವ ಶಕ್ತಿಯಾಗಿದ್ದು ಸಮಾಜದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಹೊಂದಿದ್ದಾಳೆ ” ಎಂದರು.
ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ಅಧ್ಯಾಪಕ ಕೆ ಪಿ ಜಯಕುಮಾರ್ ಮಾತನಾಡಿ “ಮಹಿಳೆ ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುವ ಕಾಲವೀಗ ಕಣ್ಮರೆಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆ. ಶಕ್ತಿ ಸಮಾಜದ ಬೆಳವಣಿಗೆಗೆ ಪೂರಕವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ತಳಮಟ್ಟದಿಂದ ಮೇಲೆ ಬಂದು ಸಮಾಜದ ಎಲ್ಲಾ ಸ್ತರಗಳಲ್ಲಿ ಮಹಿಳೆಯರು ಬೆಳೆದಿದ್ದಾರೆ. ಮಹಿಳೆಯು ಮಾತೃ ಸ್ವರೂಪಿ, ತನ್ನ ಜೀವನದಲ್ಲಿ ಎಲ್ಲಾ ಹಂತದ ಕಷ್ಟಗಳನ್ನು ಸಹನೆಯಿಂದ ದಾಟಿಕೊಂಡು ಮುನ್ನಡೆಯುತ್ತಾಳೆ. ಪ್ರಸ್ತುತ ಸಮಾಜದ ಎಲ್ಲಾ ರಂಗಗಳಲ್ಲಿ ಪುರುಷನಿಗೆ ಸಮಾನಳಾಗಿ ಅಭಿವೃದ್ಧಿ ಹೊಂದಿದ್ದಾರೆ ” ಎಂದರು.

ಸ್ತ್ರೀ ಶಕ್ತಿ ಒಕ್ಕೂಟದ ರಾಜ್ಯಧ್ಯಕ್ಷೆ ರೆಹನಾ ಸುಲ್ತಾನ್ ಮಾತನಾಡಿ, ” ಮಹಿಳೆಯರು ಕುಟುಂಬ, ಸಮಾಜ, ಅಥವಾ ಯಾವುದೇ ಕ್ಷೇತ್ರದಲ್ಲಾಗಲಿ ಸಮರ್ಥವಾಗಿ ನಿಭಾಯಿಸದೆ ಹಿಂದೆ ಸರಿದ ಉದಾಹರಣೆಗಳಿಲ್ಲ. ಮಹಿಳೆಗೆ ತನ್ನದೇ ಆದ ಜವಾಬ್ದಾರಿ ಇದ್ದು, ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ ” ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ಮಾತನಾಡಿ ‘ ಮನೆಯ ಒಳಗೆ ಮತ್ತು ಹೊರಗೂ ತನ್ನದೇ ಆದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬರುವ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಹಿಳೆಯರು ಧೈರ್ಯದಿಂದ ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ ‘ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ ಪಿ ಚಂದ್ರಕಲಾ ಮಾತನಾಡಿ ‘ ಮಹಿಳೆಯರು ಒಂದು ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬೆಳೆಯಲು ಪ್ರತಿಯೊಬ್ಬರೂ ಅವಕಾಶವನ್ನು ಕಲ್ಪಿಸಬೇಕು ಮತ್ತು ಪ್ರತಿಯೊಬ್ಬರೂ ಕೂಡ ಪ್ರೋತ್ಸಾಹಿಸಬೇಕು’ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅರಣ್ಯ ಪಾಲಾದ ಲಕ್ಷ್ಮಣಪುರ ಗ್ರಾಮ : ಪರಿಹಾರವೂ ಇಲ್ಲ, ಪುನರ್ವಸತಿಯು ಇಲ್ಲ
ಸ್ತ್ರೀ ಶಕ್ತಿ ಒಕ್ಕೂಟದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷೆ ಹೇಮಾ,ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀದೇವಿ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಆರೋಗ್ಯ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಶಾಂತಿ, ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರುಕ್ಮಿಣಿ ಸೇರಿದಂತೆ ಹಲವರು ಇದ್ದರು.