ಜಿಲ್ಲೆಯಲ್ಲಿ ಮೂತ್ರಪಿಂಡ ಸಮಸ್ಯೆ ಇರುವ ರೋಗಿಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ಕೊಟ್ಟು ಡಯಾಲಿಸಿಸ್ ಮಾಡಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೂಡಲೇ ಡಯಾಯಾಲಿಸಿಸ್ ಕೇಂದ್ರ ಹೆಚ್ಚಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಆರೋಗ್ಯ ಸಚಿವ ದಿನೇಶ್ ಗುಂಡುರಾವ ಅವರಿಗೆ ಸಭಾಧ್ಯಕ್ಷರ ಮೂಲಕ ಮನವಿ ಮಾಡಿದರು.
“ದೈನಂದಿನ ಒತ್ತಡದ ಬದುಕಿನಲ್ಲಿ ಜನರಲ್ಲಿ ಡಯಾಲಿಸಿಸ್ ಸಮಸ್ಯೆ ಹೆಚ್ಚಾಗುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಕರ್ಯ ವಿಳಂಬವಾಗಿ ಪ್ರತಿ ವಾರ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ರೋಗಿಗಳು ಚಿಕಿತ್ಸೆ ಸಿಗದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಡಯಾಲಿಸಿಸ್ ಮಾಡಿಸಿಕೊಳ್ಳದಿದ್ದರೆ ಮನೆಯಲ್ಲಿ ಕುಳಿತು ನೋವು ಅನುಭವಿಸಬೇಕಾಗುತ್ತದೆ” ಎಂದರು.
“ಜಿಲ್ಲಾ ಆಸ್ಪತ್ರೆಯಲ್ಲಿ ಜನದಟ್ಟಣೆ ಹೆಚ್ಚಾಗಿರುವ ಕಾರಣ ಡಯಾಲಿಸಿಸ್ ಮುಂದೂಡುತ್ತಿರುವುದರಿಂದ ರೋಗಿಗಳು ಸಂಕಟ ಅನುಭವಿಸುತ್ತಿದ್ದಾರೆ. ರೋಗಿಗಳು ಹೆಚ್ಚಿದ್ದು ಡಯಾಲಿಸಿಸ್ ಕೇಂದ್ರ ಕಡಿಮೆಯಿದ್ದ ಕಾರಣ ಜನರು ಸಮಸ್ಯೆಗೀಡಾಗುತ್ತಿದ್ದಾರೆ. ಅನೇಕ ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗಾಗಿ ತಿಂಗಳುಗಂಟ್ಟಲೆ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರ ಹೆಚ್ಚಿಸಿದರೆ ಜಿಲ್ಲಾ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡುಬಹುದು” ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಂಟುತ್ತಾ ಸಾಗುತ್ತಿದೆ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ; ಧೂಳು ಕುಡಿಯುತ್ತಿದ್ದಾರೆ ಜನರು
“ಹೆಚ್ಚಿನ ಹಳ್ಳಿಗಳು ಒಳಗೊಂಡ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿಟಗುಪ್ಪಾ ಹಾಗೂ ಮನ್ನಾಏಖೆಳ್ಳಿ ಆರೋಗ್ಯ ಕೇಂದ್ರಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಡಯಾಲಿಸಿಸ್ ರೋಗಿಗಳು ಆಗಮಿಸುತ್ತಿದ್ದು ಡಯಾಲಿಸಿಸ್ ಸೌಲಭ್ಯ ಇಲ್ಲದ ಕಾರಣ ಹಳ್ಳಿಗಳಿಂದ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಪಡೆಯಲು ತೊಂದರೆ ಆಗುತ್ತಿದೆ. ಹೀಗಾಗಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಟಗುಪ್ಪಾ ಹಾಗೂ ಮನ್ನಾಏಖೆಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಸದನದಲ್ಲಿ ಶಾಸಕರು ಮನವಿ ಮಾಡಿದರು.