ಹಿಂದಿನ ಚುನಾವಣೆಯಲ್ಲಿ ಯಾರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರೋ, ಅವರೇ ಈ ಬಾರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ. ಯಾರೆಲ್ಲ ಬಿಜೆಪಿ ಬೆಂಬಲ ಕೊಡುತ್ತಾರೋ, ಅವರಿಗೆಲ್ಲಾ ತಕ್ಕ ಪಾಠ ಕಲಿಸುತ್ತೇವೆ ಎಂದು ನಗರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿಯವರು ಅಧ್ಯಕ್ಷರಾಗಿದ್ದರು. ಈ ಬಾರಿ 16 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಎಲ್ಲರಿಗೂ ಪಕ್ಷದಿಂದ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೇವೆ. ನಾವು ಯಾರಿಗೂ ಹಣ ಕೊಡುವುದಿಲ್ಲ. ಪ್ರವಾಸ ಕಳಿಸುವುದಿಲ್ಲ. ಪಾರ್ಟಿ ಕೊಡಿಸುವುದಿಲ್ಲ. ನಿಯತ್ತಿನಿಂದ ಪಕ್ಷ ಕಟ್ಟಿದ್ದೇವೆ. ಯಾರಾದರೂ ಅಡ್ಡ ಮತದಾನ ಮಾಡಿದರೆ ಪಕ್ಷದಿಂದ ಉಚ್ಚಾಟನೆ ಮಾಡಿ, 6 ವರ್ಷ ಅನರ್ಹಗೊಳಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಂಸದರಿಗೆ ಕೋವಿಡ್‌ನಲ್ಲಿ ಮಾಡಿರುವ ದುಡ್ಡಿದೆ. ಹೆಣದ ಮೇಲೆ ಮಾಡಿರುವ ದುಡ್ಡಿದೆ. ಅಕ್ರಮವಾಗಿ ಮಾಡಿರುವ ದುಡ್ಡಿದೆ. ಒಂದು ವೋಟಿಗೆ ೩೦ ಲಕಷ ಕೊಡುತ್ತಿದ್ದಾರಂತೆ. ಆದರೆ, ನಾವು ಯಾರಿಗೂ ಹಣ ಹಂಚುವುದಿಲ್ಲ. ಅಯೋಗ್ಯರಿಗೆ ಹಣ ಹಂಚುವ ಬದಲು ಬಡ ಮಕ್ಕಳಿಗೆ ಕೊಟ್ಟರೆ ಅನುಕೂಲವಾಗುತ್ತದೆ. ಇದೇ ನನ್ನ ರಾಜಕಾರಣ ಶೈಲಿ. ತಲೆ ಹೊಡೆದು ರಾಜಕಾರಣ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಅಹಿಂದ ನಾಯಕನನ್ನು ಉಳಿಸಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು. ಅವರ ಪರ ನಾವೆಲ್ಲಾ ಗಟ್ಟಿಯಾಗಿ ನಿಲ್ಲುತ್ತೇವೆ. ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಕಂಡರೆ ಭಯ. ಅಹಿಂದ ನಾಯಕನನ್ನು ಸಹಿಸಿಕೊಳ್ಳುವ ಶಕ್ತಿ, ಸೌಜನ್ಯ ಕುಮಾರಸ್ವಾಮಿ ಮತ್ತು ವಿಜಯೇಂದ್ರ ಅವರಿಗೆ ಇಲ್ಲ. ಅದಕ್ಕಾಗಿ ನಾಳೆ ಸುಮಾರು 2 ಸಾವಿರ ಜನ ರಾಜಭವನ ಚಲೋ ಹೊರಟಿದ್ದೇವೆ. ನಾನು ಸಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವ ಘನತೆಗಾಗಿ ಹೋರಾಟ – ಕನ್ನಡ ತಮಿಳು ಎಂಬ ಗಡಿಗೆರೆಗಳು ಸಲ್ಲದು
ಆಪರೇಷನ್ ಕಮಲದ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು, ಅದು ಸಾಧ್ಯವಿಲ್ಲ. 135 ಜನ ಶಾಸಕರಿದ್ದಾರೆ. ನಮ್ಮ ಈ ಸರಕಾರದಲ್ಲಿ ಡಾ.ಕೆ.ಸುಧಾಕರ್ ತರ ಯಾರು ಇಲ್ಲ. ಹಾಗಾಗಿ ಯಾರೂ ಆಪರೇಷನ್‌ಗೆ ಒಳಪಡಲ್ಲ. ಬಿಜೆಪಿಯವರಿಗೆ ನಮ್ಮನ್ನ ಕೊಂಡುಕೊಳ್ಳುವ ಶಕ್ತಿ ಇದೆಯಾ?. ಅವೆಲ್ಲಾ ಮರೆಯಬೇಕು ಅವರು ಎಂದು ಸ್ಪಷ್ಟನೆ ನೀಡಿದರು.