10ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೂ ವಿದ್ಯಾರ್ಥಿ ವೇತನ | ನವೆಂಬರ್ 15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ 10ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದೀಪ್ ಈಶ್ವರ್ ಸ್ಕಾಲರ್ ಶಿಪ್ – 2024 ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ಘೋಷಣೆ ಮಾಡಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯದ ಕಂದವಾರ ಬಳಿಯಿರುವ ಶಾಸಕರ ಗೃಹಕಚೇರಿಯಲ್ಲಿ ಬುಧವಾರ ಸುದ್ದಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಸ್ಕಾಲರ್ ಶಿಪ್ ಪಡೆಯುವ ವಿದ್ಯಾರ್ಥಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು ಮತ್ತು ಅವರ ಪೋಷಕರು ನನ್ನ ಕ್ಷೇತ್ರದವರಾಗಿರಬೇಕು. ಅಂತಹವರು ಮಾತ್ರ ಸ್ಕಾಲರ್ ಶಿಪ್ ಪಡೆಯಲು ಅರ್ಹರು ಎಂದು ಹೇಳಿದರು.
10ನೇ ತರಗತಿ ವಿದ್ಯಾರ್ಥಿಗಳಿಗೆ 1000, ಡಿಪ್ಲೊಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ 1500, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 2000, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2000, ಸ್ನಾತಕೋತ್ತರ ಪದವಿ ಮತ್ತು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 3000 ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಿದರು.

ಸ್ಕಾಲರ್ ಶಿಪ್‌ಗಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ https://pradeepeshwarmla.com ಜಾಲತಾಣದಲ್ಲಿ ಮತ್ತು ಕರಪತ್ರದಲ್ಲಿರುವ ಕ್ಯೂಆರ್ ಕೋಡ್ ಬಳಸಿ ಸ್ಕಾಲರ್ ಶಿಪ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ನನ್ನ ಕ್ಷೇತ್ರದ 60,180 ಮನೆಗಳಿಗೂ ವಿದ್ಯಾರ್ಥಿ ವೇತನದ ಕುರಿತು ಒಂದು ತಿಂಗಳ ಅಭಿಯಾನದ ಮೂಲಕ ಕರಪತ್ರ ಹಂಚಿಕೆ ಮಾಡಲಾಗುವುದು. ಪ್ರದೀಪ್ ಈಶ್ವರ್ ಸ್ಕಾಲರ್‌ಶಿಪ್ ಪಡೆಯಲು ಯಾವುದೇ ಜಾತಿ, ಮತ, ಪಕ್ಷದ ನಿರ್ಭಂಧವಿಲ್ಲ. ಇದು ಜಾತ್ಯಾತೀತ ಮತ್ತು ಪಕ್ಷಾತೀತವಾದ ಕಾರ್ಯಕ್ರಮವಾಗಿದೆ. ಸ್ಕಾಲರ್ ಶಿಪ್‌ಗಾಗಿ 7 ರಿಂದ 8 ಕೋಟಿ ಖರ್ಚು ಆಗಬಹುದು ಎಂಬ ನಿರೀಕ್ಷೆ ಇದೆ. ಇದನ್ನು ಪ್ರತಿವರ್ಷ ಕೊಡುವ ಸಂಕಲ್ಪ ಮಾಡಲಾಗಿದೆ. ಕಳೆದ ವರ್ಷ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಎಂಬಿಬಿಎಸ್, ಇಂಜನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದ್ದೆ. ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಂದ ಬೇಡಿಕೆ ಬಂದ ಕಾರಣ ಸುದ್ದಿಗೋಷ್ಟಿ ಮೂಲಕ ಮಾಹಿತಿ ತಿಳಿಸುತ್ತಿದ್ದೇನೆ ಎಂದರು.
ನವೆಂಬರ್ 15ರವರೆಗೆ ಕಾಲಾವಕಾಶ
ವಿದ್ಯಾರ್ಥಿಗಳು ಮನೆಯಲ್ಲೆ ಕುಳಿತು ಸುಲಭವಾಗಿ ಪೋನ್ ಮೂಲಕ ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗಪಡೆದುಕೊಳ್ಳಬಹುದು. ಅಕ್ಟೋಬರ್ ೧೫ ರಿಂದ ನವೆಂಬರ್ ೧೫ರವರೆಗೂ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ- ಬಿಜೆಪಿ ಪಾಲಿಗೆ ವರವೇ ಅಥವಾ ಶಾಪವೇ?
ದೀಪಾವಳಿಗೆ 20 ಸಾವಿರ ಮಕ್ಕಳಿಗೆ ಬಟ್ಟೆ
ಕ್ಷೇತ್ರದಲ್ಲಿ ನಾನು ಎಂಎಲ್‌ಎ ಆದ ಕೂಡಲೇ ಗಂಟು ಮಾಡುವ ಬದಲಿಗೆ ಜನರ ಸಂಕಷ್ಟಗಳ ಪರಿಹಾರಕ್ಕೆ ಅವರ ಮನೆಬಾಗಿಲಿಗೆ ನಾನೇ ಹೋಗಿದ್ದೇನೆ. ಜನರ ಕಷ್ಟ ಪರಿಹಾರಕ್ಕೆ https://pradeepeshwarmla.com ಜಾಲತಾಣ ಪ್ರಾರಂಭಿಸಿದ್ದೇನೆ. ಒಂದೂವರೆ ವರ್ಷದಿಂದ ವರಮಹಾಲಕ್ಷ್ಮೀ ಹಬ್ಬಕ್ಕೆ ನನ್ನ ತಾಯಂದಿರಿಗೆ ಅಕ್ಕ – ತಂಗಿಯರಿಗೆ ಹರಿಶಿಣ ಕುಂಕುಮ ಕೊಡುತ್ತಿದ್ದೇನೆ. ನನ್ನ ಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದೆಂದು ವಾರ ಪೂರ್ತಿ ದಿನದ 24 ಗಂಟೆ ಕೆಲಸ ಮಾಡುವ 10 ಆಂಬುಲೆನ್ಸ್ ಮೂಲಕ ಉಚಿತ ಸೇವೆ ನೀಡುತ್ತಿದ್ದೇನೆ. ಪ್ರತಿ ದೀಪಾವಳಿಗೆ 20 ಸಾವಿರ ಶಾಲಾ ಮಕ್ಕಳಿಗೆ ಹೊಸಬಟ್ಟೆ ಕೊಡಿಸುತ್ತಿದ್ದೇನೆ. ಶಿವರಾತ್ರಿಗೆ 5 ಸಾವಿರ ಅಂಗನವಾಡಿ ಮಕ್ಕಳಿಗೆ ಹೊಸಬಟ್ಟೆ ಕೊಡುವ ಕೆಲಸ ಮಾಡುತ್ತಿದ್ದೇನೆ. ನನ್ನ ಬದುಕನ್ನು ಕ್ಷೇತ್ರದ ಜನರಿಗಾಗಿ ಮೀಸಲಾಗಿಟ್ಟಿದ್ದೇನೆ. ಅಧಿಕಾರಕ್ಕಾಗಿ ನಾನು ಆಸೆ ಪಟ್ಟವನಲ್ಲ ಎಂದು ಹೇಳಿದರು.