ರಾಜ್ಯದ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಜಿಟಿಸಿಸಿ ಕೇಂದ್ರಗಳಿವೆ. ಆದರೆ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಇಲ್ಲ. ಹೀಗಾಗಿ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಜಿಟಿಸಿಸಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಸರ್ಕಾರವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಜಿಟಿಸಿಸಿ ಸ್ಥಾಪನೆ ಬಗ್ಗೆ ಪ್ರಶ್ನೆ ಕೇಳಿದರು. “ಜಿಟಿಸಿಸಿ ಕೇಂದ್ರ ಮಂಜೂರು ಮಾಡಲು ಅನುಸರಿಸಬೇಕಾದ ಮಾನದಂಡಗಳು ಇಂಡಿ ತಾಲೂಕಿನಲ್ಲಿವೆ. ಇಂಡಿ ತಾಲೂಕು ಕಂದಾಯ ಉಪ ವಿಭಾಗಾಧಿಕಾರಿ ಕೇಂದ್ರವಾಗಿದೆ.
ಮತ್ತು ಇಂಡಿ ಪಟ್ಟಣದ ವಸಂತ ನಗರದಲ್ಲಿ ಸರ್ವೇ ನಂ.738ರಲ್ಲಿ ಯೋಜನೆಗೆ ಅವಶ್ಯವಿರುವ 19 ಎಕರೆ ಜಮೀನು ಇದೆ” ಎಂದು ತಿಳಿಸಿದರು.
“ಸರ್ಕಾರಕ್ಕೆ ಪ್ರಸ್ತಾವನೆಯಲ್ಲಿ ಕೂಡ ತಿಳಿಸಲಾಗಿದೆ. ಸಂಬಂಧಿತ ಕಡತ ಲಗ್ತಿಸಿದ್ದಲ್ಲದೆ, ಎಐಸಿಟಿ ಈ ಅಖಿಲ ಭಾರತ ತಾಂತ್ರಿಕ ಮಹಾವಿದ್ಯಾಲಯಗಳ ಒಕ್ಕೂಟದ ಮಾರ್ಗ ಸೂಚಿಯಂತೆ ಇಂಡಿ ತಾಲೂಕಿನಲ್ಲಿ 39 ಪ್ರೌಢಶಾಲೆಗಳಿವೆ. ಔದ್ಯೋಗ ತರಬೇತಿ ಕೇಂದ್ರ, ಝಳಕಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಮತ್ತು ಖಾಸಗಿ ಇಂಜಿನಿಯರಿಂಗ್ ಮಹಾ ವಿದ್ಯಾಲಯಗಳಿವೆ” ಎಂದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಸಾಧಕ ಬಾಧಕ ಪರಿಶೀಲಿಸಿ ಅರ್ಥಿಕ ಇಲಾಖೆಯ ಸಹ ಮತ ಮೇಲೆ ಜಿ.ಟಿ.ಸಿ.ಸಿ. ಕೇಂದ್ರ ಇಂಡಿಯಲ್ಲಿ ಸ್ಥಾಪಿಸಲು ಪರಿಶೀಲಿಸಲಾಗುವುದು” ಎಂದರು.