ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದೀಗ, ಅವರ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರದಲ್ಲಿ ಪತ್ತೆಯಾಗಿದೆ.
ರಾಮಪುರದ ಪ್ರಾಥಮಿಕ ಆರೋಗ್ಯದ ಕೇಂದ್ರದ ಎದುರು ಕಾರು ಪತ್ತೆಯಾಗಿದೆ ಕಾರಿನ ಬಳಿ ಗಾಜಿನ ಚೂರುಗಳು ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಕಾಣೆಯಾಗಿದ್ದರು. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹದೇವಯ್ಯ ಅವರ ಮೊಬೈಲ್ ಲೋಕೇಷನ್ ಆಧರಿಸಿ ಪರಿಶೀಲನೆ ನಡೆಸಲಾಗಿತ್ತು.
ಲೋಕೇಶನ್‌ನಲ್ಲಿ ಅವರು ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಇದ್ದಾರೆಂದು ತಿಳುದುಬಂದಿತ್ತು. ಇದೀಗ, ರಾಮಪುರ ಪೊಲೀಸ್ ಠಾಣೆಯ ನೈಟ್ ಬೀಟ್ ಪೊಲೀಸರು ಕಾರನ್ನು ಪತ್ತೆ ಮಾಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾರಿನ ಕಾಜು ಒಡೆದಿರುವುದು ಕಂಡುಬಂದಿದೆ.
ಸಿ.ಪಿ ಯೋಗೇಶ್ವರ ಕೂಡ ಕಾರು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
“ಮಹದೇವಯ್ಯ ನಾಪತ್ತೆ ಬಗ್ಗೆ ಅವರ ಮಗ ಪ್ರಕರಣ ದಾಖಲಿಸಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದೇವೆ. ಅವರ ಕಾರು ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ತನಿಖೆ ಮುಂದುವರಿದಿದೆ” ಎಂದು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.