ಮಲೆನಾಡು ಎಂದರೆ ಹಚ್ಚ ಹಸಿರಿನಿಂದ ಕೂಡಿರುವ ಕಾಡು, ಗುಡ್ಡ ಬೆಟ್ಟಗಳಿಂದ ಕಂಗೊಳಿಸುತ್ತಿವೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಇಲ್ಲಿನ ವಾಸ ಮಾಡುತ್ತಿರುವ ಕಾಡಂಚಿನ ಜನರ ಪರಿಸ್ಥಿತಿ ಮಾತ್ರ ಹೇಳತೀರದ್ದಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ಕುಂದೂರು ಗ್ರಾಮದ ಮಂಡಗುಳಿ ಹರದ ನಿವಾಸಿಗಳು ವಸತಿ ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ಕಂಗಾಲಾಗಿದ್ದು, “ನಮಗೆ ಪುನರ್ವಸತಿ ಕಲ್ಪಿಸಲಾಗದಿದ್ದರೆ ದಯಾಮರಣ ಕೊಡಿ” ಎಂದು ಅಧಿಕಾರಿಗಳಲ್ಲಿ ಭಿನ್ನವಿಸಿಕೊಂಡಿದ್ದಾರೆ.
ಮಳೆಗಾಲ ಬಂದರೆ ಸಾಕು ಇಲ್ಲಿನ ನಿವಾಸಿಗಳಿಗೆ ಆತಂಕ ಶುರುವಾಗುತ್ತದೆ. ಮಳೆಯಿಂದ ತಾವು ವಾಸಿಸುವ ಮನೆಯ ಗೋಡೆಗಳ ಕುಸಿತದ ಭಯ, ರಸ್ತೆಗಳೆಲ್ಲಲ್ಲವೂ ಹೊಂಡ ಹಾಗೂ ಗುಂಡಿಯ ಜೊತೆಗೆ ಕೆಸರಿನಿಂದ ಕೂಡಿದೆ. ಈ ಪ್ರದೇಶದಲ್ಲಿ ಸುಮಾರು 16 ಕುಟುಂಬಗಳು ವಾಸಿಸುತ್ತಿದ್ದು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಬದುಕುತ್ತಿದ್ದಾರೆ ಹಾಗೂ ಈ ಕುಟುಂಬಗಳಿಗೆ ಇದುವರೆಗೆ ಯಾವುದೇ ನಿರ್ದಿಷ್ಟ ಜಾಗವನ್ನು ಗುರುತಿಸಿ, ಶಾಶ್ವತವಾದ ಪುನರ್ವಸತಿಯನ್ನು ಸರ್ಕಾರ ಕಲ್ಪಿಸಿಕೊಟ್ಟಿಲ್ಲ. ಹಿರಿಯ ಅಧಿಕಾರಿಗಳಲ್ಲಿ ಈ ಬಗ್ಗೆ ನಿವಾಸಿಗಳು ಕೇಳಿದಾಗ, ‘ಈಗ ಆಗುತ್ತೆ…ನಾಳೆ ಆಗುತ್ತೆ’ ಎಂಬ ಉತ್ತರವಷ್ಟೇ ಸಿಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
“ಒಂದೋ ನಮಗೆ ಪುನರ್ವಸತಿ ಕಲ್ಪಿಸಿಕೊಡಿ. ಅದು ಮಾಡಲಾಗದಿದ್ದರೆ ದಯಾಮರಣ ಕೊಡಿ” ಎಂದು ಅಧಿಕಾರಿಗಳಲ್ಲಿ ಭಿನ್ನವಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ವಾಸ ಸ್ಥಳಗಳಿಗೆ ಮೂಡಿಗೆರೆ ವೃತ್ತ ನಿರೀಕ್ಷಕರಾದ ಸೋಮೇಗೌಡ, ಅಲ್ದೂರು ವಲಯ ಅರಣ್ಯಾಧಿಕಾರಿ ಹರೀಶ್.ಎಂ. ಆರ್ ಹಾಗೂ ಸಿಬ್ಬಂದಿಗಳು ಖುದ್ದಾಗಿ ಭೇಟಿ ನೀಡಿದ್ದಾರೆ.
ಅಲ್ಲಿನ ನಿವಾಸಿಗಳ ಜೊತೆ ಮಾತನಾಡಿರುವ ಅಧಿಕಾರಿಗಳು, “ತಮ್ಮ ಬೇಡಿಕೆಯು ನ್ಯಾಯ ಪರವಾಗಿದೆ. ಮೂಲಸೌಕರ್ಯ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂಬಂಧಪಟ್ಟವರ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮೈಸೂರು | ಜನರ ಪಾಲಿಗೆ ನರಕವಾದ ಚೆಲುವಾಂಬ ಸರ್ಕಾರಿ ಆಸ್ಪತ್ರೆ; ಕಣ್ಣಾಡಿಸುವರೇ ಆರೋಗ್ಯ ಸಚಿವರು?
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಸ್ಥಳೀಯ ನಿವಾಸಿಗಳು, “ನಮಗೆ ಪುನರ್ವಸತಿ ಕಲ್ಪಿಸುವಂತೆ ಈ ಹಿಂದೆ ಕೋರಿದ್ದೆವು. ಸರಿಯಾದ ವ್ಯವಸ್ಥೆ ಕಲ್ಪಿಸದ್ದಕ್ಕೆ ಆಕ್ರೋಶಗೊಂಡು ದಯಾಮರಣ ಕೊಡಿ ಎಂದಿದ್ದೆವು. ಹೀಗಾಗಿ, ನಮ್ಮ ಪರಿಸ್ಥಿತಿಯನ್ನು ನೋಡಲೆಂದು ಕೆಲವು ಅಧಿಕಾರಿಗಳು ಬಂದಿದ್ದಾರೆ. ಶೀಘ್ರದಲ್ಲೇ ಶಾಶ್ವತ ಪರಿಹಾರ ಕಂಡುಕೊಂಡು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾದು ನೋಡುತ್ತೇವೆ” ಎಂದು ತಿಳಿಸಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.