ನಗರವಾಸಿಗಳನ್ನು ಮತ್ತೆ ಗ್ರಾಮೀಣ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲೊಂದು ಸ್ಲಂ ನಿರ್ಮಿಸುತ್ತಿದ್ದೀರಿ? 20 ಅಡಿ ರಸ್ತೆ ನಿರ್ಮಿಸಿ, 20-30 ಅಡಿ ಸೈಟ್ ನೀಡುತ್ತಿದ್ದೀರಿ. ಬಡಜನರಿಗೆ ಏನಾದರೂ ಮಾಡಬೇಕಾದರೆ ಇಚ್ಛಾಶಕ್ತಿ ಬೇಕು ಎಂದು ಸಂಸದರ ನಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಟೀಕಿಸಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ೨೦೨೪-೨೫ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾತನಾಡಿದರು.
ಜಿಲ್ಲೆಯ ಅಭಿವೃದ್ದಿ ವಿಚಾರವಾಗಿ ದೊಡ್ಡದೊಡ್ಡ ಯೋಜನೆಗಳಿಗೆ ಕೈಹಾಕಿದ್ದೇನೆ. ಇದರಲ್ಲಿ ಕೈಗಾರಿಕಾಭಿವೃದ್ದಿಯೂ ಒಂದಾಗಿದೆ. ಇದಕ್ಕೆ ಸಂಸದರೇ ಅಡ್ಡಿಪಡಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೈಗಾರಿಕಾಭಿವೃದ್ದಿಯಾದರೆ ಸ್ಥಳೀಯರಿಗೆ ಉದ್ಯೋಗ ದೊರೆಯುವುದಿಲ್ಲವೆ? ರೈತರಿಗೂ ಅನುಕೂಲ ಅಗುವುದಿಲ್ಲವೆ? ಅಬಿವೃದ್ದಿ ವಿಚಾರದಲ್ಲಿ ನಾವು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೇವೆ. ಒಣಪ್ರತಿಷ್ಠೆ ಬಿಟ್ಟು ಸಂಸದರು ಕೂಡ ಅಭಿವೃದ್ದಿಗೆ ಕೈಜೋಡಿಸಲಿ ಎಂದು ಸಂಸದ ಸುಧಾಕರ್‌ಗೆ ತಿರುಗೇಟು ನೀಡಿದರು.
ಇವೆಲ್ಲಾ ಅಭಿವೃದ್ಧಿ ಅಲ್ಲವೆ?: ನಾನು ಅಧಿಕಾರಕ್ಕೆ ಬಂದ ಮೇಲೆ ಕೈಗಾರಿಕೀಕರಣಕ್ಕೆ ಒತ್ತು ನೀಡಿದ್ದೇನೆ. ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆ ಸ್ಥಾಪನೆಗೆ ಒತ್ತು ನೀಡಿದ್ದೇನೆ. ಹೂವಿನ ಮಾರುಕಟ್ಟೆ ನಿರ್ಮಿಸಲು ನೀಲನಕ್ಷೆ ತಯಾರು ಮಾಡಲಾಗಿದೆ. ನಂದಿ ರೋಪ್‌ವೇ ಕಾಮಗಾರಿಗಳು ನಿಲ್ಲದಂತೆ ನೋಡಿಕೊಂಡಿದ್ದೇನೆ. ನಂದಿ ರಂಗಮಂದಿರ ಲೋಕಾರ್ಪಣೆಗೆ ಸಜ್ಜಾಗಿದೆ. ಚಿಂತಾಮಣಿಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆಗೆ ಒತ್ತು ನೀಡಲಾಗಿದೆ. ಮೆಡಿಕಲ್ ಕಾಲೇಜು ಕಾಮಗಾರಿ ಪೂರ್ಣಗೊಳಿಸಲು, ಅನುದಾನ ಬಿಡುಗಡೆಗೊಳಿಸಲು ಶ್ರಮಿಸಿದ್ದೇನೆ. ಇವೆಲ್ಲಾ ಅಭಿವೃದ್ದಿಯ ಕೆಲಸಗಳು ಅಲ್ಲವೆ? ಎಂದ ಅವರು ಸಂಸದರು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದು ಬೇಡ ಎಂದು ಹೇಳಿದರು.
ಜಂಟಿ ಸಮೀಕ್ಷೆ ಮಾಡಿ ಸೌಲಭ್ಯ ನೀಡೋಣ!: ಗ್ರಾಮೀಣ ಪ್ರದೇಶದ ಮಂದಿ ನಗರಕ್ಕೆ ಬಂದು ವಾಸ ಮಾಡುತ್ತಿರುವ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಗರದಿಂದ ಹೊರಗೆ 10-18 ಕಿ.ಮಿ ದೂರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ನೀಡಿದರೆ ಅವರು ಅಲ್ಲಿ ಮನೆ ಕಟ್ಟಲು ಇಚ್ಚಿಸುತ್ತಾರಾ? ನಗರದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ನೀಡುವವರು ಯಾರು? ಮೊದಲೇ ಅಭಿವೃದ್ಧಿಪಡಿಸಿ ನಿವೇಶ ಹಂಚಿಕೆ ಯಾಕೆ ಮಾಡಲಿಲ್ಲ? ಈ ಬಗ್ಗೆ ಫಲಾನುಭವಿಗಳು, ಸಂಸದರು, ಮಾಧ್ಯಮ ಪ್ರತಿನಿಧಿಗಳು ಮತ್ತು ನಾವು ಒಟ್ಟಿಗೆ ಜಂಟಿ ಸಮೀಕ್ಷೆ ಮಾಡೋಣ. ಸೈಟ್ ನೀಡುವ ಕಡೆಯಿರುವ ಸೌಲಭ್ಯವೇನು? ಒಂದು ವೇಳೆ ನಿವೇಶನದಾರರು ಒಪ್ಪಿದರೆ ನಾನು ಅವರು ಮನೆ ನಿರ್ಮಿಸಿಕೊಳ್ಳಲು ಸಹಕಾರ ನೀಡಲು ಬದ್ದ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿಜೆಪಿ ಬೀದಿ ಬಡಿದಾಟದ ಬಗ್ಗೆ ಆರ್‌ಎಸ್‌ಎಸ್ ಏಕೆ ಮಾತನಾಡುತ್ತಿಲ್ಲ?
ನಗರವಾಸಿಗಳಿಗೆ ಸ್ಲಂ ಮಾಡಲು ಹೊರಟಿದ್ದೀರಾ! : ನಿವೇಶನ ರಹಿತರಿಗೆ ಯಾಕೆ ನಗರಕ್ಕೆ ಅರ್ಧ ಕಿ.ಮಿ. ದೂರದಲ್ಲಿ ಲೇಔಟ್ ಅಭಿವೃದ್ಧಿ ಮಾಡಿ ಅವರಿಗೆ ನಿವೇಶನ ನೀಡಲಿಲ್ಲ. ಆಗ ನಗರದ ಸುತ್ತಮುತ್ತ ಸರಕಾರಿ ಜಮೀನು ಇರಲಿಲ್ಲವೆ? ನನಗೆ ಗೊತ್ತು ನೀವು ಇಲ್ಲ ಎಂದು ಹೇಳುತ್ತೀರಿ? ನಾನು ತೋರಿಸಲಾ ಎಂದು ಸಂಸದರನ್ನು ಪ್ರಶ್ನಿಸಿದ ಡಾ.ಎಂ.ಸಿ.ಸುಧಾಕರ್ ನಗರಕ್ಕೆ ಹೊಂದಿಕೊಂಡಂತೆ ನೀವು ಬಡಾವಣೆ ನಿರ್ಮಾಣ ಮಾಡಿದ್ದೀರಾ? ಆದೇಶ ಪ್ರತಿ ಓದಿದ್ದೀರಾ ಎಂದು ಸಂಸದರನ್ನು ಪ್ರಶ್ನಿಸಿದ ಸಚಿವರು ಜಂಟಿ ಸಮೀಕ್ಷೆ ಮಾಡೋಣ, ನೀವೂ ಬನ್ನಿ, ಫಲಾನುಭವಿಯೂ ಇರಲಿ, ಅವರು ಒಪ್ಪಿದರೆ ಖಂಡಿತವಾಗಿ ಅಭಿವೃದ್ದಿಗೆ ಸಹಕರಿಸುವೆ ಎಂದು ಸ್ಪಷ್ಟಪಡಿಸಿದರು.