ಗುಡಿಸಲು ಕಟ್ಟಿಕೊಂಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಆಸರೆಯಾಗಿದ್ದ ಗುಡಿಸಲಿಗೇ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಮಕ್ಕಳ ಪಠ್ಯ ಪುಸ್ತಕಗಳು ಕೂಡ ಸುಟ್ಟು ಭಸ್ಮವಾಗಿದೆ.
ಸುಮಾರು ವರ್ಷದಿಂದ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆ ಹೊಸಪುರ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಸಮುದಾಯದಕ್ಕೆ ಸೇರಿದ ಜ್ಯೋತಿ ಮತ್ತು ಚಂದ್ರು ದಂಪತಿ ತಡಿಕೆಯಿಂದಲೇ ಮನೆ ನಿರ್ಮಿಸಿಕೊಂಡಿದ್ದು, ತಮ್ಮ ಇಬ್ಬರು ಮಕ್ಕಳೊಂದಿಗೆ ಆ ಗುಡಿಸಲಿನಲ್ಲಿಯೇ ಜೀವನ ಸಾಗಿಸುತ್ತಿದ್ದರು. ಇದೀಗ ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಕುಟುಂಬಸ್ಥರ ಬದುಕು ಅತಂತ್ರವಾಗಿದೆ.

ಪರಿಶಿಷ್ಟ ಪಂಗಡದ ಹಸಲರು ಜನಾಂಗದ ಚಂದ್ರು ದಂಪತಿ ಮನೆಯಿಲ್ಲದೆ ಬೇಲಿಯ ಗುಡಿಸಲು ಕಟ್ಟಿಕೊಂಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು.
ಚಂದ್ರು ದಂಪತಿ ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಹಾಗೆಯೇ ಇಬ್ಬರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಈ ಕುಟುಂಬದ ದಂಪತಿ ಎಂದಿನಂತೆ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದರು. ಇಬ್ಬರು ಮಕ್ಕಳು ಶಾಲೆಗೆ ತೆರಳಿದ್ದರು. ಇದೇ ತಿಂಗಳು 20ರಂದು ಕೆಲಸಕ್ಕೆ ಹೋಗಿರುವ ಸಮಯದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿದೆ.

ಸಂತ್ರಸ್ತ ದಂಪತಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗ್ರಾಮದ ಸುತ್ತಮುತ್ತಲಿನ ಜನರು ಗಮನಿಸಿ ಕಿರುಚಾಡಿ ಸ್ವಲ್ಪ ಮಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ತೋಟಕ್ಕೆ ಹೋಗಿದ್ದ ಕುಟುಂಬಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಬೆಂಕಿಯಿಂದ ಗುಡಿಸಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮಕ್ಕಳು ಓದುತಿದ್ದ ಶಾಲೆಯ ಪಠ್ಯಪುಸ್ತಕಗಳು ಬೆಂಕಿಗೆ ಆಹುತಿಯಾಗಿವೆ” ಎಂದು ಅವಲತ್ತುಕೊಂಡಿದ್ದಾರೆ.
ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಬೆಂಕಿಯಿಂದ ಮನೆಯ ತಡಿಕೆ, ಪಾತ್ರೆ ಪಗಡೆ, ಬಟ್ಟೆ ಬರೆ, ದಾಖಲೆಗಳೆಲ್ಲಾ ಸುಟ್ಟುಹೋಗಿವೆ. ಇದರಿಂದ ಬಡ ಕುಟುಂಬದ ದಂಪತಿ ಮತ್ತು ಶಾಲೆಗೆ ಹೋಗುತ್ತಿರುವ ಅವರ ಮಕ್ಕಳ ಬದುಕು ಈಗ ಅತಂತ್ರವಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು
“ಸಂಬಂಧಪಟ್ಟ ಅಧಿಕಾರಿಗಳು ಸಂತ್ರಸ್ತ ದಂಪತಿಯ ಸಮಸ್ಯೆಯನ್ನು ಆಲಿಸಿ, ಆದಷ್ಟು ಬೇಗ ಕುಟುಂಬದವರಿಗೆ ಪರಿಹಾರ ದೊರಕಿಸಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.