ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಮುಳಬಾಗಿಲು ತಾಲೂಕು ಆಡಳಿತ ಶಾಂತಿ ಸಭೆ ನಡೆಸಿತು.
ತಾಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆಯಿಂದ ಎರಡು ಸಮುದಾಯಗಳ ಮುಖಂಡರೊಂದಿಗೆ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ರವಿಶಂಕರ್ ಮಾತನಾಡಿ, “ಹಬ್ಬ ಹರಿದಿನಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವುದು ಸಾರ್ವಜನಿಕರ ಆದ್ಯ ಕರ್ತವ್ಯ, ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯಿಂದ ಆಚರಿಸಿಕೊಳ್ಳಲು ಎರಡು ಸಮುದಾಯದ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದರು.
ಗಣೇಶ ಪ್ರತಿಷ್ಠಾಪನೆ ಆಯೋಜಿಸುವ ಆಯೋಜಕರು ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದಿರಬೇಕು, ಅನುಮತಿ ಇಲ್ಲದೆ ಗಣೇಶ ಪ್ರತಿಷ್ಠಾಪನೆ ಮಾಡಬಾರದು. ನಗರ ವ್ಯಾಪ್ತಿಯಲ್ಲಿ ಅನುಮತಿ ಪಡೆಯಲು ನಗರಸಭೆಯಲ್ಲಿ ಅವಕಾಶ ಕಲ್ಪಿಸಿದೆ. ಗ್ರಾಮೀಣ ಭಾಗದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಅನುಮತಿ ಪಡೆದುಕೊಳ್ಳಲು ತಿಳಿಸಿದರು.
“ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಡಿಜೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಹಾಗಾಗಿ ಡಿಜೆ ಬಳಸಬಾರದು. ಮೂರ್ತಿಗಳ ವಿಸರ್ಜನೆಗೆ ನಗರಸಭೆ ಸೂಚಿಸಿರುವ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಯುವಕರು ಮಧ್ಯ ಸೇವಿಸಿ ಗಲಾಟೆ ಇಲ್ಲವೇ ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಆಯೋಜಕರ ಮೇಲೆ ಪೊಲೀಸ್ ಇಲಾಖೆಯಿಂದ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮುಳಬಾಗಿಲು | ರೈತರ ಬೆಳೆಗಳಿಗೆ ಲಾಭದಾಯಕ ಪರಿಹಾರ ನೀಡಲು ಕಿಸಾನ್ ಸಂಘ ಮನವಿ
ಸಭೆಯಲ್ಲಿ ತಹಸೀಲ್ದಾರ್ ವಿ.ಗೀತಾ, ಎಎಸ್ಪಿ ಮನೀಷಾ, ನಗರಸಭೆ ಪೌರಾಯುಕ್ತ ವಿ.ಶ್ರೀಧರ್, ಬೆಸ್ಕಾಂ ಎಇ ಶಿವಕುಮಾರ್, ವೃತ್ತ ನಿರೀಕ್ಷಕ ಕೆ.ಜಿ ಸತೀಶ್, ಪಿಎಸ್ ಐ ಗಳಾದ ಅಣ್ಣಯ್ಯ, ಅರುಣ್ ಗೌಡ ಪಾಟೀಲ್, ಮಮತಾ, ಮುಖಂಡರಾದ ಕೇಸರಿ ಶಂಕರ್, ರಿಯಾಜ್ ಅಹ್ಮದ್, ಮೊಹಮ್ಮದ್ ಜಬಿವುಲ್ಲಾ, ನಗರಸಭೆ ಸದ್ಯಸರುಗಳು, ಗಣೇಶಪಾಳ್ಯ ಕಿಟ್ಟ, ಬಂಗಾರಿ ಮಂಜು, ಲಯನ್ ಹರಿ, ಚಂದು, ಬಾಂಬ್ ನಯಾಜ್ ಸೇರಿದಂತೆ ಎರಡು ಸಮುದಾಯಗಳ ಮುಖಂಡರು ಇದ್ದರು.