ಔರಾದ್ ತಾಲೂಕಿನ ಖಾನಾಪುರ ಗ್ರಾಮದಿಂದ ಗಡಿಕುಶನೂರ ಗ್ರಾಮಕ್ಕೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಜಾಲಿ ಮುಳ್ಳಿನ ಕಂಟಿಗಳು ಅಪಘಾತಕ್ಕೆ ಆಹ್ವಾನಿಸುವಂತೆ ತಲೆಯೆತ್ತರಕ್ಕೆ ಬೆಳೆದು ನಿಂತಿವೆ.
ರಸ್ತೆ ಬದಿಯ ಎರಡು ಕಡೆಗಳಲ್ಲಿ ಜಾಲಿ ಮುಳ್ಳಿನ ಟೊಂಗೆಗಳು ರಸ್ತೆಗೆ ಚಾಚಿಕೊಂಡಿವೆ. ಇದರಿಂದ ವಾಹನ ಸವಾರರು, ಕೂಲಿಕಾರ್ಮಿಕರು ಹಾಗೂ ಸಾರ್ವಜನಿಕರು ನಿತ್ಯ ಸಂಚರಿಸಲು ತೊಂದರೆಯಾಗುತ್ತಿದೆ. ಅದರಲ್ಲೂ ರಾತ್ರಿ ವೇಳೆ ಸಂಚರಿಸಲು ಭಯವಾಗುತ್ತಿದೆ. ಎದುರಿಗೆ ಬರುವ ವಾಹನಗಳಿಗೆ ಬೈಕ್ ಸವಾರರು ಬೈಪಾಸ್ ಆಗಬೇಕಾದರೆ ಜಾಲಿ ಮುಳ್ಳು ಮೈಗೆ ಚುಚ್ಚುತ್ತಿವೆʼ ಎಂದು ಸ್ಥಳೀಯರು ದೂರಿದ್ದಾರೆ.
ʼಈ ರಸ್ತೆ ಮಧ್ಯ ಅಲ್ಲಲ್ಲಿ ಗುಂಡಿಗಳು ತೇಲಿದ್ದು ಮಳೆಗಾಲದಲ್ಲಿ ಓಡಾಡಲು ಸಮಸ್ಯೆಯಾಗುತ್ತಿದೆ. ರಸ್ತೆಯುದ್ದಕ್ಕೂ ಯಾವುದೇ ನಾಮ ಫಲಕ ಹಾಕದ ಕಾರಣ ಅಪರಿಚಿತ ವಾಹನ ಸವಾರರಿಗೆ ದಿಕ್ಕುದೋಚದಂತಾಗಿದೆ. ಖಾನಾಪೂರ ಕ್ರಾಸ್ ಬಳಿ ಎರಡು ಕಡೆ ನಾಮಪಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಖಾನಾಪೂರ-ಗಡಿಕುಶನೂರ ಗ್ರಾಮಗಳ ನಡುವೆ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆ ಶಿಥಿಲಗೊಂಡು ಕಬ್ಬಿಣದ ಸರಳು ತೇಲಿವೆ. ಇದರಿಂದ ಪ್ರಯಾಣಿಕರು ಆತಂಕದಲ್ಲೇ ಸಂಚಾರ ಮಾಡುವಂತಾಗಿದೆʼ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವ ವೃದ್ಧ ಮಹಿಳೆ: ಕಣ್ಣು ಹಾಯಿಸುವರೇ ಅಧಿಕಾರಿಗಳು?
ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ರಸ್ತೆ ಬದಿ ಬೆಳೆದ ಅನಗತ್ಯ ಜಾಲಿ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ ರಸ್ತೆ ಗುಂಡಿ ಮುಚ್ಚಬೇಕು. ರಸ್ತೆಯಲ್ಲಿ ಸಂಚಾರಿ ನಿಯಮದ ನಾಮಫಲಕ ಅಳಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕುʼ ಎಂದು ಖಾನಾಪುರ ನಿವಾಸಿ ಸಿದ್ದು ಸ್ವಾಮಿ ಒತ್ತಾಯಿಸಿದ್ದಾರೆ.