ಸಾಲದ ಹೊರೆ ಹಾಗೂ ಬೆಳೆ ಹಾನಿಯ ಆತಂಕದಿಂದ ಮನನೊಂದ ರೈತನೊಬ್ಬ ತನ್ನ ಸ್ವಂತ ಕೃಷಿ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಫಕ್ಕೀರಗೌಡ ಬಸನಗೌಡ ಪಾಟೀಲ್ (42) ಎಂದು ಗುರುತಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ಫಕ್ಕೀರಗೌಡ ಅವರು ಸುಮಾರು ಎರಡು ಎಕರೆ ಕೃಷಿ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗಳಿಗಾಗಿ ಸ್ಥಳೀಯ ಸಹಕಾರಿ ಸಂಘ, ಗ್ರಾಮೀಣ ಬ್ಯಾಂಕ್ ಹಾಗೂ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳಿಂದ ಒಟ್ಟು ಸುಮಾರು ₹12 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು ಎನ್ನಲಾಗಿದೆ.
ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಹಾನಿಯಾಗುವ ಆತಂಕ ಎದುರಾಗಿತ್ತು. ಸಾಲ ಮರುಪಾವತಿ ಹೇಗೆ ಮಾಡುವುದು ಎಂಬ ಚಿಂತೆಯಿಂದ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲೇ ಅವರು ಸೋಮವಾರ ಬೆಳಿಗ್ಗೆ ಎಂದಿನಂತೆ ಗದ್ದೆಗೆ ಹೋಗಿದ್ದಾರೆ ರಾತ್ರಿಯಾದರೂ ಮನೆಗೆ ಬರಾದ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ ಕುಟುಂಬಸ್ಥರು ಹುಡುಕಾಡಿದಾಗ, ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ, ವಿಷ ಕುಡಿದು ಸಾವನ್ನಪ್ಪಿದ್ದಾರೆ ಎನ್ನುವ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಮೃತ ಫಕ್ಕೀರಗೌಡ ಅವರಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದು ತಂದೆಯ ಆತ್ಮಹತ್ಯೆಯಿಂದ ಮಕ್ಕಳು ಅನಾಥರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಶಿರಸಿ | ತಂದೆ ಹತ್ಯೆ, ತಾಯಿ ಜೈಲು ಪಾಲು; ಅನಾಥರಾದ ಮಕ್ಕಳ ನೆರವಿಗೆ ಧಾವಿಸಿದ ಶಾಸಕ ಭೀಮಣ್ಣ ನಾಯ್ಕ್
ಸಾವಿನ ನಿಖರ ಕಾರಣ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಮೃತ ಫಕ್ಕೀರಗೌಡ ಅವರಿಗೆ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ತ್ವರಿತ ಆರ್ಥಿಕ ನೆರವು, ಸಾಲ ಮರುಪಾವತಿಗೆ ಅನುಕೂಲಕರ ಕ್ರಮಗಳು ಹಾಗೂ ಅಗತ್ಯ ಮಾನಸಿಕ ಸಲಹಾ ಸೇವೆಗಳನ್ನು ಒದಗಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸೂಚನೆ: ಸಾಲದ ಹೊರೆ, ಬೆಳೆ ನಷ್ಟ ಅಥವಾ ಯಾವುದೇ ಸಂಕಷ್ಟ ಎದುರಾದರೂ ಆತ್ಮಹತ್ಯೆಯೇ ಪರಿಹಾರವಲ್ಲ ಸಮಸ್ಯೆ ಎದುರಾದಾಗ ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಅಥವಾ ತಜ್ಞರೊಂದಿಗೆ ಮಾತನಾಡಿ ನೆರವು ಪಡೆಯುವುದು ಮುಖ್ಯ. ಸಂಕಷ್ಟದಲ್ಲಿರುವವರಿಗೆ ಸಮಯೋಚಿತ ಬೆಂಬಲ ಮತ್ತು ಧೈರ್ಯ ತುಂಬುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.




