ವಸತಿ ಶಾಲೆಯಲ್ಲಿ ಬಿಸಿಯೂಟ ನೀಡುತ್ತಿಲ್ಲ. ತಂಗಳು ಆಹಾರ ನೀಡುತ್ತಾರೆ. ಬೇಡವೆಂದರೂ ಬಲವಂತವಾಗಿ ತಿನ್ನಲು ಕೊಡುತ್ತಾರೆ ಎಂದು ವಸತಿ ಶಾಲೆಯ ಮಕ್ಕಳು ಆರೋಪಿಸಿದ್ದಾರೆ.
ಹಾವೇರಿಯ ಕರ್ಜಗಿ-ಗಂಜೀಗಟ್ಟೆ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ.ರಾಮತ್ನಾಳ ಅವರು ಶುಕ್ರವಾರ ಭೇಟಿ ನೀಡಿದ್ದರು. ಈ ವೇಳೆ, ವಿದ್ಯಾರ್ಥಿಗಳು ಶಾಲೆಯ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಸತಿ ಶಾಲೆಯ ಅವ್ಯವಸ್ಥೆಯನ್ನು ಗಮನಿಸಿದ ಶೇಖರಗೌಡ ಶಾಲೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶೇಖರಗೌಡ ಅವರ ಎದುರು ತಮ್ಮ ಅಳಲು ತೋಡಿಕೊಂಡಿರುವ ವಿದ್ಯಾರ್ಥಿಗಳು, “ರಾತ್ರಿ ಉಳಿದ ಆಹಾರವನ್ನು ಬೆಳಿಗ್ಗೆ ಉಪಹಾರಕ್ಕೆ ಮತ್ತು ಬೆಳಗಿನ ಆಹಾರವಮ್ಮಿ ಮಧ್ಯಾಹ್ನದ ಊಟಕ್ಕೆ ಕೊಡುತ್ತಾರೆ. ಕೊಟ್ಟೆ ತುಂಬಾ ಕೂಡ ಊಟ ಕೊಡುತ್ತಿಲ್ಲ. ತಂಗಳು ಆಹಾರವನ್ನೇ ಬಲವಂತವಾಗಿ ತಿನ್ನಲು ಕೊಡುತ್ತಾರೆ” ಎಂದು ಆರೋಪಿಸಿದ್ದಾರೆ.
ಅಲ್ಲದೆ, ಈ ವರ್ಷ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರ ಒದಗಿಸಿರುವ ನೋಟ್ ಪುಸ್ತಕ ಮತ್ತು ಪೆನ್‌ಗಳನ್ಣೂ ಕೂಡ ವಿತರಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮಕ್ಕಳ ಆರೋಪಗಳನ್ನು ಗಣನೆಗೆ ತೆಗೆದುಕೊಂಡಿರುವ ಸೇಖರಗೌಡ, ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಶಾಲೆಯ ಪ್ರಾಚಾರ್ಯ ಮತ್ತು ವಾರ್ಡನ್‌ಗಳಿಗೆ ಸಮನ್ಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.