ಕೊಲೆ ಪತ್ತೆಯಾದ 6 ಗಂಟೆಗಳಲ್ಲಿ ಕೊಲೆ ಆರೋಪಿಗಳ ಪತ್ತೆ
ಹಾರೋಬಂಡೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಪುತ್ರ ಮಾರುತೇಶ್ ಬಿನ್ ನಾಗರೆಡ್ಡಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರೋಬಂಡೆ ಗ್ರಾಮದ ವಿನೋದ್ ಗೌಡ(22) ಬಿನ್ ಲೇಟ್ ದೇವರಾಜು, ಶಿಡ್ಲಘಟ್ಟ ತಾಲೂಕಿನ ಕೆ.ಜಿ.ಪುರ ಗ್ರಾಮದ ಅಭಿಷೇಕ್ ಬಿನ್ ಹನುಮಂತಪ್ಪ(19) ಕೊಲೆ ಮಾಡಿರುವ ಆರೋಪಿಗಳು.
ಕೊಲೆಗೆ ಕಾರಣ : ಮಾರುತೇಶ್ ಮತ್ತು ವಿನೋದ್ ಗೌಡ ಈ ಹಿಂದೆ ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿದ್ದು, ಮಾರುತೇಶ್ ಅದರ ಬಿಲ್ ಪಾವತಿ ಮಾಡಿರಲಿಲ್ಲ. ಇದಾದ ಬಳಿಕ ಡಿ.29ರಂದು ರಾತ್ರಿ 8.30 ಗಂಟೆಗೆ ಹಾರೋಬಂಡೆ ಗ್ರಾಮದ ಖಾಸಗಿ ಬಡಾವಣೆಯೊಂದರಲ್ಲಿ ಮದ್ಯ ಸೇವನೆ ಮಾಡಿ ಹಳೆಯ ವಿಚಾರಕ್ಕೆ ಜಗಳ ಶುರುವಾಗಿತ್ತು. ಈ ವೇಳೆ ಆರೋಪಿಗಳು ಬಿಯರ್ ಬಾಟಲಿಯಿಂದ ಮಾರುತೇಶ್ ತಲೆ ಮತ್ತು ಕುತ್ತಿಗೆಗೆ ಗಾಯಪಡಿಸಿದ್ದು, ಮಾರುತೇಶ್ ಸಾವನ್ನಪ್ಪಿರುತ್ತಾರೆ.
ಸದರಿ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರ ತಂಡ, ಪ್ರಕರಣ ವರದಿಯಾದ 6 ಗಂಟೆಗಳಲ್ಲಿ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್ಪಿ ಕುಶಾಲ್ ಚೌಕ್ಸೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.