ವಿವಾಹಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಜಗಳದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವಳಚ್ಚಲ್ ಬಳಿ ನಡೆದಿದೆ. ವಾಮಂಜೂರು ನಿವಾಸಿ ಸುಲೇಮಾನ್ ಎಂಬವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಆರೋಪಿ ಮುಸ್ತಫಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮುಸ್ತಫಾಗೆ ಹತ್ಯೆಯಾಗಿರುವ ಸುಲೇಮಾನ್ ಅವರೇ ವಿವಾಹ ಮಾಡಿದ್ದರು. ಆದರೆ, ಆ ನಂತರದಲ್ಲಿ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ವಿವಾಹಕ್ಕೆ ಸಂಬಂಧಿಸಿದ ಹಣಕಾಸು ವಿಚಾರವಾಗಿ ಮಾತುಕತೆ ನಡೆಸಲು ಸುಲೇಮಾನ್ ಅವರು ತಮ್ಮಇಬ್ಬರು ಮಕ್ಕಳೊಂದಿಗೆ ಮುಸ್ತಫಾ ಮನೆಗೆ ಬಂದಿದ್ದರು.
ಈ ವೇಳೆ, ಇಬ್ಬರ ನಡುವೆ ಗಲಾಟೆ ನಡೆದಿದ್ದು, ಸುಲೇಮಾನ್ ಅವರಿಗೆ ಮುಸ್ತಫಾ ಚೂರಿಯಲ್ಲಿ ಇರಿದಿದ್ದಾನೆ. ಅಲ್ಲದೆ, ಸುಲೇಮಾನ್ ಅವರ ಪುತ್ರ ರಿಯಾಬ್ ಮತ್ತು ಸಿಯಾಬ್ ಮೇಲೂ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುಲೇಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮುಸ್ತಫನನ್ನು ಬಂಧಿಸಿದ್ದಾರೆ.
ಇತ್ತೀಚೆಗಷ್ಟೇ, ಕೇರಳದ ವಯನಾಡು ಮುಲದ ಮುಸ್ಲಿಂ ಕಾರ್ಮಿಕನನ್ನು ಹಿಂದುತ್ವವಾದಿಗಳ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಘಟನೆ ಮಾಸುವ ಮುನ್ನವೇ, ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನ ಕೊಲೆಯಾಗಿತ್ತು. ಸುಹಾಸ್ ಶೆಟ್ಟಿಯನ್ನು ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡಿದ್ದ ಬಿಜೆಪಿಗರು ಭಾರೀ ದಾಂಧಲೆ ಸೃಷ್ಟಿಸಿದ್ದರು. ಇದೀಗ, ಸಣ್ಣ ವೈಮನಸ್ಯದಿಂದ ಮತ್ತೊಂದು ಕೊಲೆಯಾಗಿದೆ.