ಕನ್ನಡ ನಾಡು ನುಡಿಗೆ ಮುಸ್ಲಿಮರ ಕೊಡುಗೆಯನ್ನು ಯಾರಿಂದಲೂ ನಗಣ್ಯವಾಗಿಸಲಾಗದು. ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಮುಸ್ಲಿಂ ಕಾರ್ಯಕರ್ತರಿದ್ದಾರೆ. ಅವರು ಕನ್ನಡದ ರಕ್ಷಣೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತಿದ್ದಾರೆ. ನಾನು ರಕ್ಷಣಾ ವೇದಿಕೆಯನ್ನು ಕಟ್ಟಿ ಎಲ್ಲಾ ಸಮುದಾಯದ ಸಾವಿರಾರು ಕಾರ್ಯಕರ್ತರನ್ನು ಭಾಷೆಯ ಬಗ್ಗೆ ಒಲವಿರುವ ಸಮುದಾಯವಾಗಿ ರೂಪಿಸದಿದ್ದರೆ ಅವರೆಲ್ಲ ಧಾರ್ಮಿಕ ಸಂಘಟನೆಗಳನ್ನು ಕಟ್ಟಿಕೊಂಡು ಪರಸ್ಪರ ಕಚ್ಚಾಡಿಕೊಂಡು ಇರುತ್ತಿದ್ದರು. ನನಗೆ 2026 ನೇ ಸಾಲಿನ ಸೌಹಾರ್ದ ಸಿರಿ ಪ್ರಶಸ್ತಿಯನ್ನು ನೀಡುವುದರ ಮೂಲಕ ಮುಸ್ಲಿಂ ಬಾಂಧವ್ಯ ವೇದಿಕೆಯು ನನ್ನ ಮೇಲೆ ಅಭಿಮಾನ ತೋರಿದ್ದು ನನಗೆ ಬಹಳ ಸಂತೋಷವಾಗಿದೆ. ಇದು ನನ್ನ ಮೂಲಕ ಸಮಸ್ತ ಕನ್ನಡಿಗರಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಭವಿಷ್ಯದ ದಿನಗಳಲ್ಲಿ ಕನ್ನಡಿಗರ ಏಕತೆ ಮತ್ತು ಭಾವೈಕ್ಯತೆಗೆ ದೊಡ್ಡ ಇಂತಹ ಪ್ರೀತಿ ಮತ್ತು ಸದ್ಭಾವನೆಗಳು ದೊಡ್ಡ ಉದಾಹರಣೆಯಾಗಿ ನಿಲ್ಲಲಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ. ಎ. ನಾರಾಯಣ ಗೌಡ ಹೇಳಿದರು.

ಅವರು ಮಂಡ್ಯದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ವತಿಯಿಂದ ನೀಡುವ ‘ಸೌಹಾರ್ದ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ‘ಸೌಹಾರ್ದ ಸಿರಿ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, “ಮುಸ್ಲಿಂ ಸಮಾಜದ ಪ್ರೀತಿ ಮತ್ತು ಭಾಂದವ್ಯದಿಂದ ದೂರವಾಗಬಾರದು ಎಂಬ ಕಾರಣದಿಂದಲೇ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲು ಬಂದಿದ್ದೇನೆ,” ಎಂದು ಹೇಳಿದರು. “ನಾನು ಯಾವುದೇ ಪ್ರಶಸ್ತಿ ಪಡೆಯಲು ಸ್ವತಃ ಹೋಗುವುದಿಲ್ಲ. ನನ್ನ ಕಚೇರಿಗೆ ನೂರಾರು ಮಂದಿ ಹಾರ-ತುರಾಯಿ ತೆಗೆದುಕೊಂಡು ಸನ್ಮಾನ ಮಾಡಲು ಬರುತ್ತಾರೆ. ಆದರೆ ನಾನು ಅವರು ತಂದ ಹಾರ ತುರಾಯಿಗಳನ್ನು ಮಾರಮ್ಮನ ದೇವಸ್ಥಾನಕ್ಕೆ ಕಳುಹಿಸುತ್ತೇನೆ. ಗೌರವ ಎನ್ನುವುದು ವ್ಯಕ್ತಿಗಿಂತ ಮೌಲ್ಯಗಳಿಗೆ ಸಲ್ಲಬೇಕು,” ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ನಿಂದಕರು ನಮ್ಮ ಜೊತೆ ಇರುವುದು ಅಗತ್ಯ. ನಿಂದಿಸುವವರೇ ನಮ್ಮನ್ನು ತಿದ್ದಿ ಸುಧಾರಿಸುವವರು. ಅವರು ನಮ್ಮ ಜೊತೆ ಇದ್ದರೆ ಮಾತ್ರ ನಾವು ಇನ್ನಷ್ಟು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಮಸೀದಿಗಳಲ್ಲಿ ಕನ್ನಡ ಬಳಕೆಯ ಕುರಿತು ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಮಸೀದಿಗಳಲ್ಲಿ ಕನ್ನಡ ಯಾಕಿಲ್ಲ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ನಾನು ಹಲವು ಮಸೀದಿಗಳಿಗೆ ಭೇಟಿ ನೀಡಿ, ಅಲ್ಲಿನ ಧರ್ಮಗುರುಗಳ ಜೊತೆ ಚರ್ಚೆ ನಡೆಸಿದ್ದೇನೆ. ಕನ್ನಡದಲ್ಲಿ ಪ್ರವಚನಗಳನ್ನು ನೀಡುವಂತೆ ಮನವಿ ಮಾಡಿದ್ದೇನೆ. ನಾನು ಭೇಟಿ ನೀಡಿದ ಹಲವಾರು ಮಸೀದಿಗಳಲ್ಲಿ ಕುರ್‌ಆನ್‌ನ ವಚನಗಳನ್ನು ಕನ್ನಡದಲ್ಲಿ ಗೋಡೆಗಳ ಮೇಲೆ ಅಳವಡಿಸಿರುವುದನ್ನು ಕಂಡಿದ್ದೇನೆ,” ಎಂದು ವಿವರಿಸಿದರು.

“ಇಡೀ ಕುರ್‌ಆನ್‌ನ ಅರ್ಥ ಕನ್ನಡದಲ್ಲಿ ಜನರಿಗೆ ತಿಳಿದರೆ, ಮುಸ್ಲಿಮರ ಬಗ್ಗೆ ಇರುವ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಲಕ್ಷಾಂತರ ಮುಸ್ಲಿಮರು ಕನ್ನಡ ನಾಡು-ನುಡಿಗಾಗಿ ಕೆಲಸ ಮಾಡುತ್ತಿದ್ದಾರೆ,” ಎಂದು ಅವರು ಹೇಳಿದರು.
ರಾಜಕೀಯ ಪಕ್ಷಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಎಲ್ಲಾ ಪಕ್ಷಗಳೂ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಹೇಳುತ್ತವೆ. ಆದರೆ ನಿಜವಾಗಿ ಕನ್ನಡ, ಕನ್ನಡ ಜಾತಿ, ಕನ್ನಡ ಧರ್ಮ—ಇವುಗಳಿಗಾಗಿ ಹೋರಾಟ ನಡೆಸುತ್ತಿರುವುದು ಕರ್ನಾಟಕ ರಕ್ಷಣ ವೇದಿಕೆಯಂತಹ ಸಂಘಟನೆಗಳೇ,” ಎಂದು ಅಭಿಪ್ರಾಯಪಟ್ಟರು.
ಧರ್ಮದ ಅರ್ಥದ ಬಗ್ಗೆ ಮಾತನಾಡಿದ ಅವರು ಬಸವಣ್ಣನ ವಚನವನ್ನು ಉಲ್ಲೇಖಿಸಿ, “ದಯೆಯಿಲ್ಲದೆ ಧರ್ಮವೇ ಇಲ್ಲ. ದಯೆಯೇ ಧರ್ಮದ ಮೂಲ. ಮನುಷ್ಯನನ್ನು ಮನುಷ್ಯನಾಗಿ ನೋಡುವುದೇ ಧರ್ಮ, ಮನುಷ್ಯರನ್ನು ಪ್ರೀತಿಸುವುದೇ ನಿಜವಾದ ಧರ್ಮ,” ಎಂದು ಹೇಳಿದರು.
ತಮ್ಮ ಹೋರಾಟದ ಹಿನ್ನೆಲೆಯನ್ನು ನೆನಪಿಸಿಕೊಂಡ ಅವರು, “ಕಾವೇರಿ ಹೋರಾಟ ನಡೆದ ಎರಡು ಸಂದರ್ಭಗಳಲ್ಲಿ ನನ್ನ ಮಕ್ಕಳು ಹುಟ್ಟಿದ್ದರು, ಆದರೆ ನಾನು ಜೈಲಿನಲ್ಲಿ ಇದ್ದೆ. ಹೋರಾಟವೇ ನಮ್ಮ ಜೀವನ. ಕನ್ನಡದ ಉಳಿವಿಗಾಗಿ ನಮ್ಮ ಹೋರಾಟ ನಿರಂತರ,” ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರು, ಜನರಲ್ಲಿ ರಾಜಕೀಯ ಮತ್ತು ಶೈಕ್ಷಣಿಕ ಜಾಗೃತಿ ಹೆಚ್ಚಿಸುವ ಅಗತ್ಯವಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 8 ಲಕ್ಷ ಕೋಟಿ ರೂ. ಆದಾಯ ಇದ್ದರೂ, ಅದನ್ನು ಸಮರ್ಪಕವಾಗಿ ಬಳಸುವ ಜ್ಞಾನ ಕೊರತೆಯಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. “ನನ್ನ ಚಿಂತನೆಗಳೇ ಮುಸ್ಲೀಮ್ ಭಾಂದವ್ಯ ವೇದಿಕೆಯ ಮೂಲಕ ಕಾರ್ಯರೂಪಕ್ಕೆ ಬರುತ್ತಿವೆ,” ಎಂದು ಹೇಳಿದರು.
ಸುಮಾರು 50 ವರ್ಷಗಳ ಹಿಂದೆಯೇ ಈ ರೀತಿಯ ಕನ್ನಡ ಪರ ಹಾಗೂ ಮಾನವ ಭಾಂದವ್ಯ ಕಾರ್ಯಗಳು ಆರಂಭವಾಗಬೇಕಾಗಿತ್ತು. ಆದರೆ ಇದೀಗ ಆದರೂ ಈ ಕಾರ್ಯಗಳು ನಡೆಯುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸುವುದಾಗಿ ಹೇಳಿದರು.

ಇದೇ ವೇಳೆ, ಸಂಘಟನೆಯ ಕಾರ್ಯಚಟುವಟಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ತಪ್ಪಿಸುವಂತೆ ಸಲಹೆ ನೀಡಿದ ಅವರು, “ರಾಜಕಾರಣಿಗಳನ್ನು ನಿಮ್ಮ ವೇದಿಕೆಯಿಂದ ದೂರವಿಡಿ. ಕಾರ್ಯಕ್ರಮಗಳಿಗೆ ಆಹ್ವಾನಿ, ಆದರೆ ಅವರನ್ನು ಸಂಘಟನೆಯ ಒಳಗೆ ಸೇರಿಸಿಕೊಳ್ಳಬೇಡಿ,” ಎಂದು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಬಾಂಧವ್ಯ ವೇದಿಕೆಯ ಗೌರವಾಧ್ಯಕ್ಷರಾದ ಡಾ. ಮುಹಮ್ಮದ್ ಶಫಿ ಮುಲ್ಲಾ ವಹಿಸಿದ್ದರು. ನಿವೃತ್ತ ನ್ಯಾಯಾಧೀಶರಾದ ನಬಿರಸೂಲ್ ಮಮದಾಪುರ್, ಮುಸ್ಲಿಂ ಬಾಂಧವ್ಯ ವೇದಿಕೆಯ ಸಲಹೆಗಾರರಾದ ಡಾ. ಅಬ್ದುಲ್ ರಜ್ಜಾಕ್ ಉಸ್ತಾದ್, ಮಂಡ್ಯ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮುಖಾರ್ ಅಹ್ಮದ್, ಅನುಪಮ ಮಾಸಿಕದ ಸಂಪಾದಕರಾದ ಶೆಹನಾಜ್ ಎಂ., ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷರಾದ ಝಾಕೀರ್ ಹುಸೇನ್ ಉಚ್ಚಿಲ, ಕಾರ್ಯದರ್ಶಿ ರಹಮತ್ ದಾವಣಗೆರೆ, ಗೌರವ ಉಪಾಧ್ಯಕ್ಷ ಇಬ್ರಾಹಿಮ್ ಸಾಹೇಬ್ ಕೋಟ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಿರಿನುಡಿಯನ್ನು ಹಯಾತ್ ಕಾರ್ಗಲ್ ಮಂಡಿಸಿದರು. ಸ್ವಾಗತ ಭಾಷಣವನ್ನು ಅನೀಸ್ ಪಾಷಾ ನೆರವೇರಿಸಿದರು. ಪ್ರಾಸ್ತಾವಿಕ ನುಡಿಯನ್ನು ಮುಸ್ತಾಕ್ ಹೆನ್ನಾಬೈಲ್ ವಹಿಸಿದರು. ಮೌಲಾನ್ ಹಫೀಜ್ ಕಾರ್ಕಳ ಕುರ್ ಆನ್ ಪಠಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಂಡ್ಯ ಜಿಲ್ಲೆಯ ಅಬಿ ಒಕ್ಕಲಿಗ, ಹಾಸನ ಜಿಲ್ಲೆಯ ಜಗದೀಶ ಜಾಣಜಾಣೆಯರು, ದಕ್ಷಿಣ ಕನ್ನಡ ಜಿಲ್ಲೆಯ ರೂಪೇಶ ಪುತ್ತೂರು, ದಾವಣಗೆರೆ ಜಿಲ್ಲೆಯ ರುದ್ರು ಪುನೀತ್ ಹಾಗೂ ಬಳ್ಳಾರಿ ಜಿಲ್ಲೆಯ ಸಿದ್ದರಾಮ ಕಲ್ಮಠ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲೀಮ್ ಬಾಂಧವ್ಯ ವೇದಿಕೆಯ ಸದಸ್ಯರಾದ ಮುಜಫರ್ ಹುಸೇನ್ ಪಿರಿಯಾಪಟ್ಟಣ, ಮೌಲಾನಾ ಅಬ್ದುಲ್ ಹಫೀಜ್ ಕಾಸಿಮಿ ಕಾರ್ಕಳ, ಅಬ್ದುಲ್ ರೌಫ್ ಶಿರೂರು, ಇಬ್ರಾಹಿಂ ನಡುಪದವು, ಅಸ್ಲಾಂ ಹೈಕಾಡಿ, ಅಶ್ರಫ್ ಕುಂದಾಪುರ, ಪೀರೂ ಸಾಹೇಬ್, ಮುಷ್ತಾಕ್ ಅಹ್ಮದ್ ಬೆಳ್ವೆ, ಪರ್ವೇಜ್ ತೀರ್ಥಹಳ್ಳಿ, ಡಾ. ನೂರ್ ಸಮದ್ ಅಬ್ಬಲಗೆರೆ, ಇಬ್ರಾಹಿಂ ಬಿ ಟಿ, ಖಲೀಲ್ ತಲಪಾಡಿ, ದಸ್ತಗಿರ್ ಕಲ್ಲಹಳ್ಳಿ, ನಜೀರ್ ಬೆಳವಾಯಿ, ನಿಸ್ಸಾರ್ ಗುಡ್ಡೆಯಂಗಡಿ, ಮೊಹಮ್ಮದ್ ರಿಯಾಜ್ ಕಾರ್ಕಳ, ಶಾರುಖ್ ತೀರ್ಥಹಳ್ಳಿ, ಮುನಾಫ್ ಪಟೇಲ್ ಚಿತ್ರದುರ್ಗ, ಸೈಯದ್ ಘನಿ ಖಾನ್ ಮಂಡ್ಯ, ಶಮೀರ ಚಿಕ್ಕಬಳ್ಳಾಪುರ ಮುಂತಾದವರು ಉಪಸ್ಥಿತರಿದ್ದರು.






