ಮುಸ್ಲಿಮ್ ಲೇಖಕರ ಸಂಘವು ಮರ್ಹೂಂ ಯು.ಟಿ.ಫರೀದ್ ಅವರ ಸ್ಮರಣಾರ್ಥ ನೀಡುವ 2023ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ.ಮಿರ್ಜಾ ಬಶೀರ್ ಅವರಿಗೆ ಪ್ರದಾನ ಮಾಡಲಾಯಿತು.
ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜು ಅವರಣದಲ್ಲಿರುವ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಪ್ರಶಸ್ತಿ ಪ್ರದಾನಿಸಿದ ಬಳಿಕ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಯುವ ಜನಾಂಗಕ್ಕೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಹಿತ್ಯ ಅಗತ್ಯವಾಗಿದೆ. ಯುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮುಸ್ಲಿಮ್ ಲೇಖಕರ ಸಂಘ ಮಾಡುತ್ತಿರುವುದು ಶ್ಲಾಘನೀಯ. ತನ್ನ ಕಥಾ ಸಂಕಲನಕ್ಕೆ ಈ ಪ್ರಶಸ್ತಿಯನ್ನು ಪಡೆದಿರುವ ಡಾ.ಮಿರ್ಜಾ ಬಶೀರ್‌ಗೆ ಭವಿಷ್ಯದ ದಿನಗಳಲ್ಲಿ ಸಾಹಿತ್ಯಕ್ಕೆ ನೀಡುವ ಉನ್ನತ ಪ್ರಶಸ್ತಿಗಳು ಲಭಿಸಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೆಫ್ಟಿನೆಂಟ್ ಭವ್ಯಾ ನರಸಿಂಹ ಮೂರ್ತಿಯವರು, ದ್ವೇಷದ ರಾಜಕಾರಣ ಮತ್ತು ಪ್ರಜಾತಂತ್ರದ ಭವಿಷ್ಯ ಎಂಬ ಕೇಂದ್ರೀಯ ವಿಷಯದಲ್ಲಿ ಮಾತನಾಡಿದರು.
ಅಬ್ರಕಡಬ್ರ ಕಥಾ ಸಂಕಲನಕ್ಕಾಗಿ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪಡೆದ ಡಾ.ಮಿರ್ಜಾ ಬಶೀರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಎಚ್. ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಜಲೀಲ್ ಮುಕ್ರಿ, ಶಮೀಮಾ ಕುತ್ತಾರ್, ಬಶೀರ್ ಅಹ್ಮದ್ ಕಿನ್ಯಾ, ಅಕ್ಷತಾ ರಾಜ್ ಪೆರ್ಲ, ಕವನ ವಾಚಿಸಿದರು.
ಹುಸೈನ್ ಕಾಟಿಪಳ್ಳ ಸ್ತುತಿಗೀತೆ ಹಾಡಿದರು. ಹಿರಿಯ ಪತ್ರಕರ್ತ ಏ.ಕೆ.ಕುಕ್ಕಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಆಲಿಕುಂಞಿ ಪಾರೆ ವಂದಿಸಿದರು. ಮುಸ್ಲಿಮ್ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

