ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆ ಶಿಡ್ಲಘಟ್ಟ ನಗರದ ಮುಸ್ಲೀಂ ನಿವಾಸಿಗಳು ವಿದ್ಯುತ್ ಕಡಿತಗೊಳಿಸುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಮುಸ್ಲಿಂ ಸಮಾಜದ ಹಕ್ಕುಗಳನ್ನು ಕಸಿದುಕೊಳ್ಳುವ ಜೊತೆಗೆ ಮುಸ್ಲಿಂ ಸಮಾಜದ ಪೂರ್ವಜರು ದಾನ ಧರ್ಮದ ರೂಪದಲ್ಲಿ ನೀಡಿರುವ ಸ್ಥಿರ ಮತ್ತು ಚರಾಸ್ತಿಗಳನ್ನು ಲೂಟಿ ಮಾಡಲು ಹುನ್ನಾರ ನಡೆಸಿದೆ ಎಂದು ಮುಸ್ಲಿಂ ಸಮಾಜ ತೀವ್ರ ಆಕ್ರೋಶ ಹೊರಹಾಕಿದೆ.
ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶಾದ್ಯಂತ ರಾತ್ರಿ 9:00 ಗಂಟೆಯಿಂದ 9:15ವರೆಗೆ ಮುಸ್ಲಿಂ ಸಮಾಜದವರು ತಮ್ಮ ತಮ್ಮ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳ ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದ್ದರು. ಅವರ ಕರೆಗೆ ಮುಸ್ಲಿಂ ಸಮಾಜ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿ ವಿದ್ಯುತ್ ದೀಪಗಳನ್ನು ಆರಿಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಶಿಡ್ಲಘಟ್ಟ ನಗರದ ಬಹುತೇಕ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಬೀದಿ ದೀಪಗಳು ಮತ್ತು ಮನೆ ದೀಪಗಳನ್ನು ಬಂದ್ ಮಾಡಿದ್ದರಿಂದ ಬಹುತೇಕ ಪ್ರದೇಶಗಳು ಕಗ್ಗತಲಲ್ಲಿ ಮುಳುಗಿದವು.