ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯ ಬಿಸಿಲಿನ ತಾಪಕ್ಕೆ ನಲುಗಿದೆ, ಕೆರೆಕಟ್ಟೆ ಬರಿದಾಗಿ ಪ್ರಾಣಿಗಳ ದಾಹ ಇಂಗಿಸಲು ಟ್ಯಾಂಕರ್ ಮೂಲಕ ನೀರು ತುಂಬಿಸುವ ಪ್ರಯತ್ನ ಸಾಗುತ್ತಿದೆ.
ಮೈಸೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನಾಗರಹೊಳೆ (ರಾಜೀವ್ ಗಾಂಧಿ ) ರಾಷ್ಟ್ರೀಯ ಉದ್ಯಾನವನ ದೇಶದ 37 ನೇ ಹುಲಿ ಮೀಸಲು ಪ್ರದೇಶ. ಎತ್ತ ನೋಡಿದರತ್ತ ದಟ್ಟವಾದ ಅರಣ್ಯ, ವನ್ಯ ಮೃಗಗಳ ಸಂರಕ್ಷಿತ ಪ್ರದೇಶವಾಗಿದ್ದು.
ಸುಮಾರು 643 ಕಿಮೀ ವಿಸ್ತೀರ್ಣ ಹೊಂದಿದೆ. ನಾಗರಹೊಳೆ ಸುತ್ತಮುತ್ತ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮದುಮಲೈ ರಾಷ್ಟ್ರೀಯ ಉದ್ಯಾನವನ, ವಯನಾಡ್ ವನ್ಯಜೀವಿ ಅಭಯಾರಣ್ಯ ಹಬ್ಬಿದೆ,ಅತಿ ಹೆಚ್ಚು ಅರಣ್ಯ ವ್ಯಾಪ್ತಿ ಹೊಂದಿದ ದಟ್ಟಾರಣ್ಯ.
ಆದರೆ, ಬೇಸಿಗೆ ಬಂದರೆ ವನ್ಯ ಸಂಕುಲಕ್ಕೆ ಇನ್ನಿಲ್ಲದ ನೀರಿನ ತತ್ವಾರ.ಸರಿ ಸುಮಾರು 200 ಕ್ಕು ಹೆಚ್ಚು ಕೆರೆಕಟ್ಟೆ ಹೊಂದಿದ್ದು, ಶೇ.80% ರಷ್ಟು ಜಲಮೂಲಗಳು ಬತ್ತಿವೆ. ನಾಗರಹೊಳೆ ವ್ಯಾಪ್ತಿಯ ಮೇಟಿಕುಪ್ಪೆ, ಅಂತರಸಂತೆ, ಆನೆ ಚೌಕೂರು, ವೀರನ ಹೊಸಹಳ್ಳಿ ಸುತ್ತಲಿನ ಪ್ರಮುಖವಾಗಿ ನೀರಿನ ಆಸರೆಯಾಗಿರುವ ಕೆರೆಗಳು ಬತ್ತಿವೆ.

‘ನಾಗರಹೊಳೆ ವಿಶೇಷ ಎಂದರೆ ವಾರ್ಷಿಕ ಮಳೆ ಸಾರಾಸರಿ 57 ಇಂಚು, ಜಿನುಗು ಪ್ರದೇಶ, ಹಳ್ಳ ಕೊಳ್ಳಗಳಿಗೆ ಲೆಕ್ಕವಿಲ್ಲ. ಕೆರೆಯಿಂದ ಕೆರೆಗೆ ಹರೆವ ಕೊಳ್ಳಗಳು, ಲಕ್ಶ್ಮಣತೀರ್ಥ, ಸಾರತಿ ಹೊಳೆ, ನಾಗರ ಹೊಳೆ, ಬಲ್ಲೆ ಹಳ್ಳ, ಕಬಿನಿ ಪ್ರಮುಖವಾಗಿ ಹರಿಯುವ ನದಿಗಳು. 47 ತೊರೆಗಳ ಮಾದರಿ ಕಿರು ನದಿ, ಅಭಯಾರಣ್ಯ ಸಮೀಪ ತಾರಕ ಆಣೆಕಟ್ಟು ಮತ್ತು ಕಬಿನಿ ಜಾಲಶಯಗಳೇ ಜಲ ಮೂಲ ‘.
ಇಷ್ಟೆಲ್ಲ ಇದ್ದರು ಬೇಸಿಗೆಯಲ್ಲಿ ನೀರಿನ ಅಭಾವ ಇಂತಹ ದಟ್ಟ ಕಾನನವನ್ನು ಬಿಟ್ಟಿಲ್ಲ ನೀರಿನ ತತ್ವಾರ.ಅರಣ್ಯದಲ್ಲೇ ಇಂತಹ ಶೋಚನಿಯ ಸ್ಥಿತಿಯಾದರೆ ಇನ್ನ ನಾಡಿನ ಕಥೆ ಹೇಳಲಾಗದಷ್ಟು ಶೋಚನಿಯ.ಈ ವರ್ಷ ಅತಿ ಹೆಚ್ಚು ಮಳೆಯಾಗಿದ್ದರು ಸಹ ಬಿರುಬಿಸಲಿನ ತಾಪ ಹೆಚ್ಚಿದೆ, ಫೆಬ್ರವರಿಯಲ್ಲಿ ಇಷ್ಟೊಂದು ತಾಪ ಹೆಚ್ಚುರುವುದು ನೀರಿನ ಸೆಲೆ ಬತ್ತಲು ಕಾರಣ. ನಾಗರಹೊಳೆ ಪ್ರಾಣಿ, ಪಕ್ಷಿಗಳ ದೊಡ್ಡ ಮಟ್ಟದ ಸಂಕುಲವನ್ನೇ ಸಲುಹುತ್ತಿರುವ ಕಾಡು.

ಬೇಸಿಗೆಯಲ್ಲಿ ಆಹಾರ, ನೀರನ್ನ ಅರಸಿ ಗ್ರಾಮಗಳತ್ತ ಪ್ರಾಣಿಗಳು ಬರುತ್ತವೆ. ಬೇಸಿಗೆಯ ತಾಪಕ್ಕೆ ನೀರಿನ ಮೂಲಗಳು ಬತ್ತಿರುತ್ತವೆ, ಇನ್ನ ಆಹಾರದ ಅಭಾವ ದಟ್ಟಾರಣ್ಯ ಬರಿದಾದಂತೆ ಪ್ರಾಣಿಗಳಿಗೆ ನರಕದ ವಾತಾವರಣ. ಕೆಲವೆಡೆ ಕಾಡ್ಗಿಚ್ಚು, ಇನ್ನ ಕೆಲವೆಡೆ ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ ಇದೆಲ್ಲವೂ ಪ್ರಾಣಿ, ಪಕ್ಷಿಗಳ ಮೇಲೆ ಪರಿಣಾಮ ಬೀರಿ ಆತಂಕ ಸೃಷ್ಟಿ ಮಾಡುತ್ತದೆ.
ಕಾಡಿನ ಕೆಲವು ಕೆರೆಗಳ ಸಮೀಪ ಬಾವಿ ಕೊರೆಸಲಾಗಿದ್ದು ಅದರ ಮೂಲಕ, ಕಾಡಂಚಿನ ರೈತರ ಜಮೀನು ಮೂಲಕ ಕೆರೆಗಳಿಗೆ ನೀರು ಹರಿಸುವುದು, ಟ್ಯಾಂಕರ್ ಮೂಲಕ ತುಂಬಿಸುವ ಪ್ರಯತ್ನ ನಡೆಯುತ್ತಿದೆ.ಬಿಸಿಲಿನ ತಾಪ ಹೆಚ್ಚಾದಂತೆ ಆನೆಗಳ ಹಿಂಡು ಕಬಿನಿ, ತಾರಕ ಜಾಲಾಶಯಗಳ ಹಿನ್ನೀರಿನಲ್ಲಿ ಬೀಡು ಬಿಡುತ್ತವೆ. ಇನ್ನ ಮೇವಿನ ಕೊರತೆ ಆದಂತೆಲ್ಲ ರೈತರ ಜಮೀನಿನ ಕಡೆಗೆ, ಗ್ರಾಮದತ್ತ ದಾಳಿ ಮಾಡುವುದು ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸಫಾರಿ ಸಮಯದಲ್ಲಿ ಆನೆ, ಹುಲಿ, ಚಿರತೆ ಸಾಮಾನ್ಯವಾಗಿ ನೀರಿನ ಹೊಂಡದ ಬಳಿಯೇ ಕಾಣ ಸಿಗುತ್ತವೆ. ಮಾನವ – ಪ್ರಾಣಿ ಸಂಘರ್ಷ ಬೇಸಿಗೆಯಲ್ಲಿ ತಾರಕಕ್ಕೇರುವುದು ಸರ್ವೇ ಸಾಮಾನ್ಯವಾಗಿದೆ, ಯಾಕಂದರೆ ಪ್ರಾಣಿಗಳಿಗೆ, ಪಕ್ಷಿಗಳಿಗೆ ದಾಹ, ಹಸಿವು ಇಂಗಿಸಿಕೊಳ್ಳುವ ಅನಿವಾರ್ಯತೆ.
ಈಗಾಗಲೇ ಅಲ್ಲಲ್ಲಿ ಗುಂಡಿ ತೆಗೆದು ನೀರು ತುಂಬಿಸುವ ಕೆಲಸ ಪ್ರಗತಿಯಲ್ಲಿದ್ದರು ಇಡೀ ಕಾಡಿನ ಪ್ರಾಣಿಗಳ ದಾಹ ತೀರಿಸಲು ಸಾಧ್ಯವಿಲ್ಲ. ಮಳೆ ಆರಂಭವಾದರೆ ಮಾತ್ರ ನೀರಿನ ಅಭಾವ ನಿವಾರಿಸಲು ಸಾಧ್ಯ. ಇಲಾಖೆ ಕಡೆಯಿಂದ ಕ್ರಿಯಾಯೋಜನೆ ಸಿದ್ದಪಡಿಸಿ. ನೀರಿನ ಅಭಾವ ಎದುರಾಗದ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಅನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ನಾಗರಹೊಳೆ ಆದಿವಾಸಿ ಕುಂಜಟಿರ ಈದಿನ. ಕಾಮ್ ಜೊತೆ ಮಾತನಾಡಿ “ಬೇಸಿಗೆ ಕಾಲ ಪ್ರಾಣಿಗಳಷ್ಟೇ ಅಲ್ಲ ಕಾಡಿನಲ್ಲೇ ಜೀವನ ಮಾಡುವ ನಮ್ಮಗಳ ಮೇಲು ಪರಿಣಾಮ ಬೀರುತ್ತೆ. ಕುಡಿಯಲು ನೀರು ಸಿಗಲ್ಲ. ಕೊಳ್ಳಗಳು, ಗುಂಡಿ ಬತ್ತಿದರೆ ನಮಗೆ ನೀರು ಸಿಗೋದೆ ಇಲ್ಲ. ನಾಗರಹೊಳೆ ಮಳೆಗಾಲದಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನೀರು ಇರೋದಿಲ್ಲ. ಒಂದು ಕಡೆ ಪ್ರಾಣಿಗಳು ನೀರಿಗಾಗಿ ಪರದಾಡಿದರೆ,ಇನ್ನೊಂದು ಕಡೆ ಆದಿವಾಸಿಗಳು ಕಾಡಿನಲ್ಲಿ ನೀರಿಗಾಗಿ ಪರದಾಡಬೇಕು. ಇರುವ ಬಾವಿ ಬೇಸಿಗೆ ಕಳೆಯುವವರೆಗು ಆಸರೆ. ಇನ್ನ ನಮ್ಮಗಳ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲ ಬೇಸಿಗೆಯಲ್ಲಿ ” ಎಂದು ಅಳಲು ತೋಡಿಕೊಳ್ಳುತ್ತಾರೆ.
ವೀರನಹೊಸಳ್ಳಿ ಶಿವರಾಜು ಮಾತನಾಡಿ ಮಳೆಗಾಲದಲ್ಲಿ ಒಂತರ ಸಮಸ್ಯೆ ಆದರೆ, ಬೇಸಿಗೆ ಕಾಲದಲ್ಲಿ ಬೇರೆಯದೆ ತೊಂದರೆಗಳು. ಆನೆಗಳಂತು ಕಾಡು ಬಿಟ್ಟು ನೀರು, ಆಹಾರ ಹುಡುಕಿ ಯಾವಾಗ? ಎಲ್ಲಿ? ಹೇಗೆ ಬರುತ್ತೆ ಅಂತೇಳಲು ಸಾಧ್ಯವೇ ಇಲ್ಲ.ಈಗಂತೂ ಬಿಸಿಲು ಹೆಚ್ಚಿಗೆ ಇದೆ ಕಾಡಿನಲ್ಲಿ ಮೇವು ಇಲ್ಲ, ನೀರು ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಇದೆ ಅಷ್ಟೇ, ಹೀಗೆ ಬಿಸಿಲು ಜಾಸ್ತಿ ಆದರೆ ನೀರು ಬತ್ತಿ ಹೋಗುತ್ತೆ ಎಂದರು.

“ಮಾರ್ಚ್ ಮೊದಲ ವಾರಗಳಲ್ಲೇ ಇಂತಹ ಪರಿಸ್ಥಿತಿ ಎದುರಾದರೆ ಮುಂದೆ ಏಪ್ರಿಲ್, ಮೇ ತಿಂಗಳವರೆಗೆ ತೀರ ನೀರಿನ ಅಭಾವ ತಲೆದೂರಲಿದ್ದು, ಮಳೆಯ ನಿರೀಕ್ಷೆಯಲ್ಲಿ ಇರುವಂತಾಗಿದೆ. ಈಗ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ನೀರು ತುಂಬಿಸುವ ಕೆಲಸ ಸಾಗುತ್ತಿದೆ.ಬಿಸಿಲಿನ ಝಳಕ್ಕೆ, ಭೂಮಿಯ ತಾಪಕ್ಕೆ ಎಷ್ಟು ನೀರು ತುಂಬಿಸಿದರು ಬರಿದಾಗುತ್ತೆ, ಕಾಡಾಚಿನಿಂದ ನೀರು ತರುವುದು ಸಹ ಸವಾಲಿನ ಕೆಲಸ ” ಎಂದು ಅರಣ್ಯ ಅಧಿಕಾರಿ ಸಿದ್ದರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಆದಿವಾಸಿ ಮಹಿಳೆ ಸಾವಿತ್ರಮ್ಮ ಮಾತನಾಡಿ ” ಕಾಡಿನಲ್ಲಿ ಬದುಕುವ ನಮಗೆ ಕಷ್ಟಾನೋ, ಸುಖಾನೋ ಮಳೆಗಾಲವೇ ಸರಿ. ಬೇಸಿಗೆ ಬಂದರೆ ಬದುಕುವುದು ಕಷ್ಟ. ಕಾಡಿನಲ್ಲಿ ನಮಗೆ ಆಹಾರ ಸಿಗಲ್ಲ ಏನೇ ಬೇಕು ಅಂದ್ರು ಕಾಡಿಂದ ಆಚೆ ಹೋಗಿ, ಕೂಲಿ ಮಾಡಿ ಅಗತ್ಯ ಇರೋದನ್ನ ತರಬೇಕು. ಮಳೆಗಾಲದಲ್ಲಿ ನೀರಿನ ತೋಡು, ನಾಗರಹೊಳೆ ಕೊಲ್ಲಿ ಕಡೆ ಗುಂಡಿ ಮಾಡಿ ದಿನನಿತ್ಯ ಬಳಕೆಗೆ, ಕುಡಿಯಲು ಬಳಸುತ್ತೀವಿ. ಈಗ ಕುಡಿಯಲು ನೀರು ಸಿಗಲ್ಲ, ಐದಾರು ಕಿಮೀ ಅಲೆಯಬೇಕು. ಹೊಳೆಯಲ್ಲೂ ಹರಿತ ಇರೋದು ಅಲ್ಪ ಸ್ವಲ್ಪ ನೀರು, ಈಗಿರೋ ಬಿಸಿಲು ನೋಡಿದ್ರೆ ಸ್ವಲ್ಪ ದಿನದಲ್ಲಿ ಅದು ಬತ್ತೋಗುತ್ತೆ. ಇನ್ನ ಕುಡಿಯಲು, ದಿನ ಬಳಕೆಗೆ ತುಂಬಾ ಕಷ್ಟ ಪಡ್ತೀವಿ. ನಾವು ಕಾಯೋದು ಯಾವಾಗ ಮಳೆ ಬರುತ್ತೆ ಅಂತ ಅದೊಂದೇ ನಮಗಿರುವ ಭರವಸೆ ” ಎಂದರು.
ನಾಗರಹೊಳೆ ಅತಿ ಹೆಚ್ಚು ಪ್ರಾಣಿ, ಪಕ್ಷಿಗಳನ್ನು ಹೊಂದಿರುವ ಅರಣ್ಯ. ಬೇಸಿಗೆಯ ಆರಂಭಿಕ ದಿನಗಳು ದುಬಾರಿಯಾಗಿ ಪರಿಣಮಿಸುತ್ತಿದೆ. ಮಳೆ ಆಗಿದ್ದರು, ಜಾಲಾಶಯಗಳಲಿ ನೀರಿನ ಪ್ರಮಾಣ ಇದ್ದರು ಸಹ. ಮುಖ್ಯವಾಗಿ ಬತ್ತುತ್ತಿರುವ, ಬತ್ತಿರುವ ಜಲ ಮೂಲಗಳು. ನೀರಿನ ಸೆಲೆ ಜೊತೆಗೆ, ಆಹಾರದ ಒಸುಗೆಯನ್ನು ಇಲ್ಲದಂತೆ ಮಾಡಿ. ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ
ಕಾರಣವಾಗುವ ಸಂದರ್ಭ ಸೃಷ್ಟಿಯಾಗುತ್ತೆ. ಇಂತಹ ಸಮಯದಲ್ಲಿ ನೀರಿನ ಬಗ್ಗೆ ಅರಿವು, ಪ್ರಜ್ಞೆ ಇರಲಿ ಯಾರೇ ಆಗಲಿ ವಿನಾಕಾರಣ ವ್ಯರ್ಥ ಮಾಡದೆ. ಇಂತಹ ಸಮಯದಲ್ಲಿ ಜವಾಬ್ದಾರಿ ಪ್ರದರ್ಶಿಸಬೇಕು.
ಈ ಸುದ್ದಿ ಓದಿದ್ದೀರಾ? ಕೊಡಗು | ಗಾಂಜಾ ಮಾರಾಟ ಮೈಸೂರು ಮೂಲದ ವ್ಯಕ್ತಿ ಬಂಧನ
ಗ್ರಾಮಗಳ ಹೊರಭಾಗದಲ್ಲಿ ಸಾಧ್ಯವಾದಷ್ಟು ಮೇವು, ನೀರಿನ ಸಂಗ್ರಹ ತೊಟ್ಟಿ ತುಂಬಿದ್ದರೆ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳ ಆಹಾಹಕಾರ ಸ್ವಲ್ಪ ಪ್ರಮಾಣದಲ್ಲಾದರು ತಡೆಯಬಹುದು. ಮನೆ ಮೇಲಿನ ತಾರಸಿ, ಕಂಪೌಂಡ್
ಇತ್ಯಾದಿ ಬಳಕೆ ಮಾಡಿ ಕಾಳು, ದಿನಸಿ, ನೀರು ಇರಿಸಿ ಇದು ಈದಿನ. ಕಾಮ್ ಮನವಿ.