ರಾಜ್ಯದಲ್ಲಿ ಜನಪರ ಶಿಕ್ಷಣ ನೀತಿ ರಚಿಸುವಂತೆ ಆಗ್ರಹಿಸಿ ಹೋರಾಡಲು ಮುನ್ನುಗ್ಗಿ ಎಂದು ಎಐಡಿಎಸ್‌ಒ ಕಾರ್ಯಕರ್ತರು ಶನಿವಾರದಂದು ಮೈಸೂರು ಜಿಲ್ಲಾ ಮಟ್ಟದ 7ನೇ ವಿದ್ಯಾರ್ಥಿ ಸಮ್ಮೇಳನ ಹಮ್ಮಿಕೊಂಡಿದ್ದು, ಬೃಹತ್ ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್ ಮಾತನಾಡಿ “ರಾಜ್ಯದಲ್ಲಿ ಎನ್‌ಇಪಿ-2020 ತೆಗೆದು ಹಾಕಲು ಮುಖ್ಯ ಕಾರಣ ವಿದ್ಯಾರ್ಥಿಗಳ ಹೋರಾಟ. ರಾಜ್ಯ ಶಿಕ್ಷಣ ನೀತಿಯಲ್ಲಿ ಸರ್ಕಾರಿ ಶಾಲಾ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳ ಹಣದ ಮೇಲೆ ಅವಲಂಬಿತರಾಗಬಾರದು. ಕಡಿಮೆ ದಾಖಲಾತಿ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲನಗೊಳಿಸುವುದು ಹಾಗೂ ಮುಚ್ಚುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
“ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಾರ್ಪೊರೇಟ್ ಕಂಪನಿಗಳ ಬಳಿ ಧನ ಸಹಾಯ ಪಡೆಯುವ ಬದಲು, ಜನಗಳಿಂದ ಸಂಗ್ರಹಿಸಿರುವ ತೆರಿಗೆ ಹಣದಲ್ಲಿ ಸರ್ಕಾರವೇ ನೀಡಬೇಕು. ವಿದೇಶಿ ನೇರ ಬಂಡವಾಳ ಹೂಡಿಕೆ ಹೆಸರಿನಲ್ಲಿ ವಿದೇಶಿ ವಿವಿಗಳನ್ನು ತೆರೆಯಲು ಅವಕಾಶ ಕೊಡಬಾರದು. ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣದ ಹೆಸರಿನಲ್ಲಿ ಮೌಲ್ಯಗಳನ್ನು ಕಡೆಗಣಿಸಬಾರದು. ಈ ಅಂಶಗಳನ್ನು ಗಮನಿಸಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಬೇಕು” ಎಂದು ಒತ್ತಾಯಿಸಿದರು.
“ವಿದ್ಯಾರ್ಥಿಗಳ ಬೇಡಿಕೆಗಳಂತೆ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ಶೈಕ್ಷಣಿಕ ಕ್ಷೇತ್ರಕ್ಕೆ ಹೆಸರಾಗಿರುವ ಮೈಸೂರಿನಲ್ಲೂ ಕೂಡ ಒಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಬೇಕು” ಎಂದು ಆಗ್ರಹಿಸಿದರು.
“ವಿದ್ಯಾರ್ಥಿಗಳು ಭಗತ್ ಸಿಂಗ್, ನೇತಾಜಿಯವರ ವಿಚಾರಗಳನ್ನು ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತ ಪರಿಪೂರ್ಣ ವಿದ್ಯಾರ್ಥಿಗಳಾಗಬೇಕು” ಎಂದು ಕರೆ ನೀಡಿದರು.
ಪ್ರಗತಿಪರ ಚಿಂತಕ ನಾ ದಿವಾಕರ್ ಅವರು ಎಐಡಿಎಸ್ಒ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನದ ಬಹಿರಂಗ ಅಧಿವೇಶನ ಉದ್ಘಾಟಿಸಿ ಮಾತನಾಡಿ, “ಸಮಾಜದ ಬಗ್ಗೆ ವಿದ್ಯಾರ್ಥಿ ಸಮುದಾಯ ಅರಿವು ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಹೋರಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮನರೇಗಾ ಕಾರ್ಮಿಕರಿಗೆ ಕೆಲಸ ನೀಡದಿದ್ದಲ್ಲಿ ಕಠಿಣ ಕ್ರಮ: ಸಿಇಒ
ಈ ಸಮ್ಮೇಳನದಲ್ಲಿ ಎಐಡಿಎಸ್ಒ ಮೈಸೂರು ಜಿಲ್ಲಾ ಮಟ್ಟದ ನೂತನ ಸಮಿತಿಯನ್ನು ಚುನಾಯಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಸುಭಾಷ್, ಕಾರ್ಯದರ್ಶಿಗಳಾಗಿ ಚಂದ್ರಕಲಾ, ಉಪಾಧ್ಯಕ್ಷರುಗಳಾಗಿ ನಿತಿನ್, ಸ್ವಾತಿ ಹಾಗೂ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಚಂದನ, ಚಂದ್ರಿಕಾ, ಹೇಮಲತಾ, ಅಂಜಲಿ, ದಿಶಾ, ಧನುಶ್ರೀ, ಅಭಿಷೇಕ್ ಬೀರಪ್ಪ, ಜಟ್ಟಪ್ಪ, ಮಣಿಕಂಠ ಹಾಗೂ 17ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು, 30 ಮಂದಿ ಕೌನ್ಸಿಲ್ ಸದಸ್ಯರು ಚುನಾಯಿಸಲ್ಪಟ್ಟರು.
ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್ ಚಂದ್ರ, ಪುಷ್ಪ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.