ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಪಾಠ ಪ್ರವಚನಗಳು ಮುಗಿಯದೇ ಇರುವುದರಿಂದ, ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಮೈಸೂರು ವಿ ವಿ ಮುಂಭಾಗ ಪ್ರತಿಭಟನೆ ಮಾಡಲಾಯಿತು.
ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, “ಮೈಸೂರು ವಿಶ್ವವಿದ್ಯಾನಿಲಯದ ಯುಜಿ ವಿದ್ಯಾರ್ಥಿಗಳ ಪರೀಕ್ಷಾ ನೋಟಿಫಿಕೇಶನ್ ಪ್ರಕಾರ ಡಿಸೆಂಬರ್ 28ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆಯೆಂದು ತಿಳಿಸಿದ್ದಾರೆ. ಆದರೆ ಕಾಲೇಜುಗಳಲ್ಲಿ ಆಗಸ್ಟ್‌ನಲ್ಲೇ ತರಗತಿಗಳು ಪ್ರಾರಂಭವಾದರೂ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಮತ್ತು ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲದ ಕಾರಣ ತರಗತಿಗಳು ನಡೆದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದೇಶಾದ್ಯಂತ ರೈಲ್ವೆ ಯೂನಿಯನ್ ಮಾನ್ಯತೆಗೆ ಡಿ.4 ರಿಂದ 6ರವರೆಗೆ ಚುನಾವಣೆ
“ಒಂದೂವರೆ ತಿಂಗಳಿನ ನಂತರ ತರಗತಿಗಳು ಪ್ರಾರಂಭವಾಗಿವೆ. ಇದರಿಂದ ಪಠ್ಯಕ್ರಮಗಳ ಬೋಧನೆ ಸಂಪೂರ್ಣವಾಗಿ ಮುಗಿದಿಲ್ಲ. ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆ ನಡೆಸುವುದು ಅವೈಜ್ಞಾನಿಕ. ಅಲ್ಲದೆ ಇದು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಆದ್ದರಿಂದ ಪರೀಕ್ಷೆಗಳನ್ನು ಮುಂದೂಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್, ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಾದ ಉಮೇಶ್, ಮನೋಜ್, ಕಿರಣ್ ಕುಮಾರ್, ಮಹದೇವ್, ಸಂತೋಷ್, ಪೂಜಾ, ಕವನ, ರಾಧಿಕಾ ಹಾಗೂ ಇತರ ವಿದ್ಯಾರ್ಥಿಗಳು ಇದ್ದರು.