ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್‌ಇಪಿಯನ್ನು ಹಿಂಪಡೆಯಬೇಕು, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು, ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಬೇಕು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕೆಂಬುದು ಸೇರಿದಂತೆ ಹಲವು ಆಗ್ರಹಗಳನ್ನೊಳಗೊಂಡ ವಿದ್ಯಾರ್ಥಿ ಪ್ರಣಾಳಿಕೆಯನ್ನು ಎಐಡಿಎಸ್‌ಒ ಮೈಸೂರು ಜಿಲ್ಲಾ ಸಮಿತಿಯಿಂದ ಬಿಡುಗಡೆ ಮಾಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, “ಎಲ್ಲ ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿವೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ-ಧರ್ಮದ ವಿಷಯಗಳನ್ನು ಮುನ್ನಲೆಗೆ ತರಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಜ್ಞಾವಂತಿಕೆಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ ಚರ್ಚೆಮಾಡುವ ರೀತಿ ಧ್ವನಿಯೆತ್ತಬೇಕಿದೆ” ಎಂದರು.
“ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಹಾಗೂ ನೇತಾಜಿಯವರ ಉತ್ತರಾಧಿಕಾರಿಗಳಾಗಿ ಅನ್ಯಾಯ ಮತ್ತು ಅಸತ್ಯದ ವಿರುದ್ಧ ಹೋರಾಡುವ ಉದಾತ್ತ ರಾಜಕೀಯವನ್ನು ನಡೆಸಬೇಕಿದೆ. ಪ್ರತಿಯೊಬ್ಬರಿಗೂ ಪ್ರಜಾತಾಂತ್ರಿಕ, ವೈಜ್ಞಾನಿಕ ಧರ್ಮನಿರಪೇಕ್ಷ ಶಿಕ್ಷಣವು ಖಾತ್ರಿಪಡಿಸುವಂತೆ ನಮ್ಮನ್ನಾಳುವ ಸರ್ಕಾರಗಳನ್ನು ಒತ್ತಾಯಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಮುನ್ನುಗ್ಗಬೇಕಿದೆ” ಎಂದು ಕರೆ ನೀಡಿದರು.
“ರಾಜ್ಯದಲ್ಲಿ ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್‌ಇಪಿ-2020ನ್ನು ಹಿಂಪಡೆದು, ಜನಪರ ಶಿಕ್ಷಣ ನೀತಿಯನ್ನು ರೂಪಿಸಬೇಕು. ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್‌ನಿಂದ ಶೇ.10ರಷ್ಟು ಮತ್ತು ರಾಜ್ಯ ಬಜೆಟ್‌ನಿಂದ ಶೇ.30ರಷ್ಟು ಮೀಸಲಿಡಬೇಕು. ಸರ್ವರಿಗೂ ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಮತ್ತು ಉಚಿತ ಶಿಕ್ಷಣವನ್ನು ಖಾತ್ರಿಪಡಿಸಬೇಕು” ಎಂದು ಆಗ್ರಹಿಸಿದರು.
“ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು. ಎಲ್ಲ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸಲು ಹಣವನ್ನು ಬಿಡುಗಡೆ ಮಾಡಿ ಮತ್ತು ಹೆಚ್ಚಿನ ಸರ್ಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಬೇಕು.
ಅಗತ್ಯವಿರುವ ಸಂಖ್ಯೆಯಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು.
ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಅನುದಾನಗಳು ಮತ್ತು ವಿದ್ಯಾರ್ಥಿವೇತನಗಳ ಸರಿಯಾದ
ವಿತರಣೆಯನ್ನು ಖಾತ್ರಿಪಡಿಸಬೇಕು” ಎಂದು ಒತ್ತಾಯಿಸಿದರು.
“ಅಪ್ರಜಾತಾಂತ್ರಿಕವಾಗಿ ಹೇರಿದ ನಾಲ್ಕು ವರ್ಷಗಳ ಪದವಿ ಕೋರ್ಸ್ ಹಿಂತೆಗೆದುಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು. ವಿದ್ಯಾರ್ಥಿಗಳಿಗೆ ನೈಜ ವೈಜ್ಞಾನಿಕ ಜ್ಞಾನವನ್ನು ಪಠ್ಯದ ಮೂಲಕ ಒದಗಿಸಬೇಕು. ಪಠ್ಯಪುಸ್ತಕದಲ್ಲಿ ನಮ್ಮ ದೇಶದ ನವೋದಯದ ಮಹಾನ್ ವ್ಯಕ್ತಿಗಳು ಹಾಗೂ ಕ್ರಾಂತಿಕಾರಿಗಳ ಜೀವನ ಹೋರಾಟಗಳನ್ನು ಸೇರಿಸಬೇಕು. ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿ ಬೇಡ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸರಿಯಾದ ಅನುದಾನ ನಿಗದಿ ಮಾಡಬೇಕು” ಎಂದು ಆಗ್ರಹಿಸಿದರು.
“ಎಲ್ಲ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಎಲ್ಲ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಿಕ್ಷಣದ ಸ್ವ-ಹಣಕಾಸು ವ್ಯವಸ್ಥೆಯನ್ನು ಉತ್ತೇಜಿಸುವುದನ್ನು ನಿಲ್ಲಿಸಬೇಕು. ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ನೀಟ್, ಜೆಇಇ ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ವ್ಯವಸ್ಥೆ ಒದಗಿಸಬೇಕು. ಸಾರ್ವಜನಿಕ ಬಜೆಟ್‌ನ ಶೇ.3ರಷ್ಟನ್ನು ಸಂಶೋಧನೆಗೆ ಮತ್ತು ಒಟ್ಟು ಜಿಡಿಪಿಯ ಶೇ.3ರಷ್ಟನ್ನು ಸಂಶೋಧನೆಗೆ ನಿಯೋಜಿಸಿ ಮತ್ತು ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ಗೌರವಾನ್ವಿತ ಮತ್ತು ನಿಯಮಿತ ಫೆಲೋಶಿಪ್ ಖಚಿತಪಡಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾನಸಿಕ ಸಮತೋಲನ ಕಳೆದುಕೊಂಡ ಹೆಗಡೆ: ಖರ್ಗೆ ಕಿಡಿ
ಈ ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಮೈಸೂರು ಜಿಲ್ಲಾ ಉಪಾಧ್ಯಕ್ಷ ನಿತಿನ್ ಹಾಗೂ ಸ್ವಾತಿ, ಜಿಲ್ಲಾ ಸೆಕ್ರಟೇರಿಯೇಟ್ ಸದಸ್ಯರುಗಳಾದ ಚಂದ್ರಿಕಾ, ಚಂದನಾ, ಅಂಜಲಿ, ದಿಶಾ, ಬೀರಪ್ಪ, ಮುತ್ತು, ಅಭಿಷೇಕ್ ಸೇರಿದಂತೆ ಇತರರು ಇದ್ದರು.