ಮೈಸೂರು ತಾಲ್ಲೂಕಿನ ವಾಜಮಂಗಲ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಭಾವಚಿತ್ರಕ್ಕೆ ಅಪಮಾನ ಮಾಡಿ ಬಂಧಿತರಾಗಿರುವ ಇಬ್ಬರು ಕಿಡಿಗೇಡಿಗಳ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಾಜಿ ಮಹಾಪೌರ ಪುರುಷೋತ್ತಮ್ ಒತ್ತಾಯಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ವಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳಾದ ಕೊಕ್ಕರೆಹುಂಡಿಯ ರಂಗೇಗೌಡ ಮತ್ತು ಚೋರನಹಳ್ಳಿಯ ವಸಂತ್ ಕುಮಾರ್ ಅವರನ್ನು ಪೊಲೀಸ್ ಇಲಾಖೆ ಬಂಧಿಸಿರುವುದು ಸ್ವಾಗತಾರ್ಹ. ಆದರೆ, ಕೃತ್ಯವೆಸಗಿದ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಜಾಮೀನು ಸಿಕ್ಕರೆ ಆರೋಪಿಗಳು ರಾಜಾರೋಷವಾಗಿ ಓಡಾಡಿಕೊಂಡು ಇರುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಆರೋಪಿಗಳು ವಾಜಮಂಗಲ ಗ್ರಾಮದ ಶಾಂತಿಯುತವಾದ ವಾತಾವರಣವನ್ನು ಕಲುಷಿತಗೊಳಿಸಿದ್ದಾರೆ. ಗ್ರಾಮದ ಶಾಂತಿಗೆ ಭಂಗ ಉಂಟು ಮಾಡಿ, ಗ್ರಾಮಸ್ಥರ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಇಂತಹ ಕಿಡಿಗೇಡಿಗಳಿಗೆ ನ್ಯಾಯಾಲಯ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದರು.
ಪೊಲೀಸ್ ಇಲಾಖೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ರೀತಿಯಲ್ಲಿ ಪ್ರಕರಣ ದಾಖಲಿಸಬಾರದು. ದೇಶ ದ್ರೋಹದ ಪ್ರಕರಣವನ್ನು ದಾಖಲಿಸಿ, ಕಠಿಣ ಶಿಕ್ಷೆ ಆಗುವಂತೆ ನೋಡೊಕೊಳ್ಳಬೇಕು. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲವಾದರೆ ದಲಿತ ಸಂಘಟನೆಗಳು ಜೊತೆಗೂಡಿ ವಾಜಮಂಗಲ ಗ್ರಾಮದಿಂದ ಕಾಲ್ನಡಿ ಜಾಥಾ ಹೊರಟು ಆರೋಪಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಏಳು ದಶಕ ಪೂರೈಸಿದ ಸಂಭ್ರಮ
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಭುಗತಗಳ್ಳಿ ಮಣಿಯಯ್ಯ, ಎವಿಎಸ್‌ಎಸ್ ಅಧ್ಯಕ್ಷ ತುಂಬಲ ರಾಮಣ್ಣ, ಎಸ್ಸಿ – ಎಸ್ಟಿ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಪುಟ್ಟರಾಜು, ವಾಜಮಂಗಲ ಗ್ರಾಮದ ಮುಖಂಡರಾದ ಅಂಕಪ್ಪ, ಸುರೇಶ್, ಸಿದ್ದಪ್ಪ ಇದ್ದರು.