ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರವಾಗಿ ನಗರಸಭೆಯ ದಲಿತ ಸದಸ್ಯ (ಕೌನ್ಸಿಲರ್) ಮೇಲೆ ಪ್ರಬಲ ಜಾತಿಯವರು ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಹುಣಸೂರು ನಗರಸಭೆಯ ದಲಿತ ಸದಸ್ಯ ಮಂಜು ಅವರು ಹಲ್ಲೆಗೊಳಗಾಗಿದ್ದಾರೆ. ತಮ್ಮ ಮೇಲೆ ಕಾರ್ ಸ್ಟ್ಯಾಂಡ್ ಸಂಘದ ಅಧ್ಯಕ್ಷ ದೇವರಾಜು ಎಂಬಾತ ಹಲ್ಲೆ ಮಾಡಿದ್ದಾರೆಂದು ಹಣಸೂರು ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬುಧವಾರ ಹುಣಸೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ದೇವರಾಜ್ ಎಂಬಾತ, ‘ಹೊಲೆಯ, ಮಾದಗರಿಂದ ಅಡುಗೆ ಮಾಡಿಸಿ ತಿನ್ನುವ ದರಿದ್ರ ಬಂದಿಲ್ಲ. ಅವರಿಂದ ಅಡುಗೆ ಮಾಡಿಸಬೇಡ’ ಎಂದು ಮಂಜು ಅವರೊಂದಿಗೆ ಗಲಾಟೆ ಮಾಡಿ, ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಜಾತಿ ನಿಂದನೆಯ ಕಾರಣಕ್ಕೆ ಮಂಜು ಮತ್ತು ದೇವರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆಗೆ ದೇವರಾಜ್ ತಮ್ಮ ಇಬ್ಬರು ಮಕ್ಕಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳಕ್ಕೆ ಬಂದ ರಾಜೇಶ್ ಮತ್ತು ಶರತ್ ಹಾಗೂ ದೇವರಾಜ್ ಅವರು ಮಂಜು ಅವರ ಕೊರಳಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಮಂಜು ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದರಾಜು ಆಸ್ಪತ್ರೆಗೆ ಭೇಟಿ ನೀಡಿದ್ದು, ಮಂಜು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಮಂಜು ಅವರು ಹಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರ ದೂರಿನ ಆಧಾರ ಮೇಲೆ ಆರೋಪಿಗಳ ವಿರುದ್ಧ ಎಸ್‌ಸಿ.ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 341, 323, 504, 506, 114ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಒಂದು ವೇಳೆ ಪೊಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ, ಬೃಹತ್ ಪ್ರತಿಭಟನೆ ನಡೆಸುತ್ತೇವೆ” ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ ಈದಿನ.ಕಾಮ್‌ಗೆ ತಿಳಿಸಿದ್ದಾರೆ.
ಮಂಜು ಅವರ ಮೇಲೆ ಮಾರಣಾಂತಿಕ ಹಲ್ಲೆ, ಜಾತಿ ನಿಂದನೆ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಶಿವರಾಜ್,ರಾಜು ಚಿಕ್ಕ ಹುಣಸೂರು,ಪುಟ್ಟರಾಜು,ಚಲುವರಾಜು,ವೆಂಕಟೇಶ್,ಕೃಷ್ಣ,ಸಿದ್ದೇಶ್,ಜಯಣ್ಣ ಆಗ್ರಹಿಸಿದ್ದಾರೆ.