ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಪಿರ್ಸಪ್ಪಾಡ್ ಬ್ಯಾರಿ ಕುಟುಂಬ ಸಮ್ಮಿಲನವು ಆಗಸ್ಟ್ 10ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಉಮರ್ ಯು. ಹೆಚ್. ಅವರು ಮಾಹಿತಿ ನೀಡಿದರು.
ಮೈಸೂರಿನ ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಸಹಯೋಗದೊಂದಿಗೆ, ತಿಲಕ ನಗರದ ಈದ್ಗಾ ಮೈದಾನ ಮುಂಭಾಗದಲ್ಲಿರುವ ಎ. ಆರ್. ಕನ್ವೆನ್ಷನ್ ಸೆಂಟರ್ ನಲ್ಲಿ ಸಂಜೆ 4ಕ್ಕೆ ನಡೆಯಲಿರುವ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ‘ ಬೆಲ್ಕಿರಿ ‘ ದ್ವೈಮಾಸಿಕ ಬಿಡುಗಡೆ ಮಾಡಲಿದ್ದು, ಶಾಸಕ ಕೆ. ಹರೀಶ್ ಗೌಡ ‘ ಪೆರಿಮೆ ‘ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರಿನ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಡಾ. ಮಕ್ಸೂದ್ ಅಹ್ಮದ್ ಮುಲ್ಕಿ (ಬ್ಯಾರಿ ಭಾಷೆ ಮತ್ತು ಸಂಘಟನೆ), ಹಿರಿಯ ಬ್ಯಾರಿ ಹಾಡುಗಾರ, ಕವಿ ಪಿ.ಎ. ಹಸನಬ್ಬ ಮೂಡುಬಿದರೆ (ಬ್ಯಾರಿ ಕಲೆ ಮತ್ತು ಸಂಸ್ಕೃತಿ) ಹಾಗೂ ಬ್ಯಾರಿ ಕವಿ ಮತ್ತು ಬರಹಗಾರ ಹೈದರ್ ಅಲಿ ಕಾಟಿಪಳ್ಳ (ಬ್ಯಾರಿ ಸಾಹಿತ್ಯ) ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿ ಸದಸ್ಯ ಅತ್ತೂರು ಚೆಯ್ಯಬ್ಬ ಅಭಿನಂದನಾ ಭಾಷಣ ಮಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ ಹಾಗೂ ದ.ಕ. ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯಸ್ ರೋಡ್ರಿಗಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್ (ಅಬ್ದುಲ್ಲ) ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ದಿನವಿಡೀ ನಡೆಯಲಿರವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಬ್ಯಾರಿ ಸಾಂಪ್ರದಾಯಿಕ ಆಹಾರ ಮತ್ತು ಮೆಹಂದಿ ವಿನ್ಯಾಸ, ಮಕ್ಕಳಿಗೆ ಬ್ಯಾರಿ ಹಾಡು ಹಾಗೂ ಪುರುಷ, ಮಹಿಳೆ ಮತ್ತು ಮಕ್ಕಳಿಗೆ ಬ್ಯಾರಿ ಕ್ವಿಝ್ ಸ್ಪರ್ಧೆ ಏರ್ಪಡಿಸಲಾಗಿದೆ. ದಫ್ ಕುಣಿತ, ಒಪ್ಪನೆ ಹಾಡು, ಕೋಲಾಟ, ಬ್ಯಾರಿ ಹಾಡುಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಜೈವಿಕ – ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಒತ್ತು : ಶೈಖ್ ತನ್ವಿರ್ ಆಸೀಫ್
ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷರಾದ ಹಾಜಿ ಯು.ಕೆ. ಹಮೀದ್, ಪ್ರಧಾನ ಕಾರ್ಯದರ್ಶಿ ಎಂ. ಐ. ಅಹ್ಮದ್ ಬಾವ, ಕೋಶಾಧಿಕಾರಿ ಆರಂಗಳ ಅಬ್ದುಲ್ ಹಮೀದ್, ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಫಯಾಝ್ ಪಟ್ಟು ಇದ್ದರು.