ಪ್ರತಿಯೊಬ್ಬರು ಕಡ್ಡಾಯವಾಗಿ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಇದರಿಂದ ವಂಚನೆಗೆ ಒಳಗಾಗದೇ ಜಾಗೃತವಾಗಿರಬಹುದು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ಮೈಸೂರು ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದಿಂದ ಹಮ್ಮಿಕೊಂಡಿದ್ದ ಗ್ರಾಹಕ ಜಾಗರಣ ಪಾಕ್ಷಿಕ 2023ರ ಗ್ರಾಹಕರ ಹಿತ ಚಿಂತನ ಸಭೆಯಲ್ಲಿ ಮಾತನಾಡಿದರು.
“ಯಾವುದೇ ವಸ್ತುವನ್ನು ಖರೀದಿಸಿದರೆ ನಾವು ಗ್ರಾಹಕರಾಗುತ್ತೇವೆ. ಆದರೆ ಕಾನೂನಿನ ದೃಷ್ಠಿಯಿಂದ ಗ್ರಾಹಕರಾಗಬೇಕಾದರೆ ಗ್ರಾಹಕರು ತೆಗೆದುಕೊಳ್ಳುವ ಸರಕು ಮತ್ತು ಸೇವೆಗೆ ರಸೀದಿ ತೆಗೆದುಕೊಂಡಾಗ ಮಾತ್ರ ನಾವು ಕಾನೂನು ಬದ್ಧ ಗ್ರಾಹಕರಾಗುತ್ತೇವೆ. ಅವರಿಗೆ ಕಾನೂನಿನ ರಕ್ಷಣೆ ಸಿಗಲಿದೆ” ಎಂದರು.
“ಗ್ರಾಹಕರಾದ ಮೇಲೆ ಅವರಿಗೆ ವಿಶೇಷವಾದ ಹಕ್ಕುಗಳು ಕೂಡ ಬರುತ್ತವೆ. ತಾನು ತೆಗೆದುಕೊಂಡ ಸರಕು ಅಥವಾ ಸೇವೆಗಳಿಂದ ಉಂಟಾದ ದೋಷ, ನ್ಯೂನ್ಯತೆ ಮತ್ತು ಅಪಾಯ ಉಂಟಾದರೆ ಅವರ ವಿರುದ್ಧ ರಕ್ಷಣೆ ಪಡೆಯಬಹುದು. ತಾನು ತೆಗೆದುಕೊಂಡ ವಸ್ತುವಿನ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಅದರ ಶಕ್ತಿ ಸಾಮರ್ಥ್ಯ, ಗುಣಮಟ್ಟ, ಶ್ರೇಷ್ಠತೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳವ ಹಕ್ಕು ಇರುತ್ತದೆ. ಮೋಸ, ವಂಚನೆ, ಸೇವಾ ನ್ಯೂನ್ಯತೆ ಶೋಷಣೆಗೆ ಒಳಗಾಗಿದ್ದರೆ ಅದರ ವಿರುದ್ಧ ರಕ್ಷಣೆ ಪಡೆದುಕೊಳ್ಳುವ ಹಕ್ಕು ಇರುತ್ತದೆ” ಎಂದು ಜಾಗೃತಿ ಮೂಡಿಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಸಂಚಾಲಕ ಡಾ ಜಿ ವಿ ರವಿಶಂಕರ್ ಮಾತನಾಡಿ, “ಪ್ರತಿ ವರ್ಷದಂತೆ ಗ್ರಾಹಕ ಸಂರಕ್ಷಣಾ ಕಾಯ್ದೆ ಡಿಸೆಂಬರ್ 24ರಂದು ಜಾರಿಗೆ ಬಂದ ದಿನ. ಈ ದಿನವನ್ನು ದೇಶಾದ್ಯಂತ ರಾಷ್ಟ್ರೀಯ ಗ್ರಾಹಕ ದಿನವೆಂದು ಆಚರಿಸುತ್ತೇವೆ. ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಲ್ಲಿ ನಮ್ಮ ಗ್ರಾಹಕ ಪಂಚಾಯತ್ ಕಾರ್ಯಕರ್ತರ ಶ್ರಮ ಹಾಗೂ ಅಂದು ತೆಗೆದುಕೊಂಡಂತಹ ಗ್ರಾಹಕ ಆಂದೋಲನಾತ್ಮಕ ನಿರ್ಧಾರಗಳು ಮತ್ತು ಚಟುವಟಿಕೆಗಳೇ ಕಾರಣವಾಗಿತ್ತು. ಇದರ ಸ್ಮರಣಾರ್ಥ ಈ ಸುವರ್ಣ ಮಹೋತ್ಸವ ವರ್ಷದ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಹೆಚ್ಚೆಚ್ಚು ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಜ.26ರಿಂದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ಸಂಚಾಲಕ ಡಾ ಜಿ ವಿ ರವಿಶಂಕರ್, ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಉಪಾಧ್ಯಕ್ಷ ಜಯ ಕುಮಾರ್, ದೊರೆಸ್ವಾಮಿ, ಶಿವಕುಮಾರ್, ಎಂ ವಿ ನಾಗೇಂದ್ರ ಬಾಬು, ಶ್ರೀಕಾಂತ್ ಕಶ್ಯಪ್, ಯೋಗೇಶ್ ಕುಮಾರ್, ಬೈರತಿ ಲಿಂಗರಾಜು ಸೇರಿದಂತೆ ಇತರರು ಹಾಜರಿದ್ದರು