ಮೈಸೂರು ಜಿಲ್ಲೆ, ಹುಣಸೂರು ಗಾವಡಗೆರೆಯಲ್ಲಿ ತಾಲ್ಲೂಕು ಆಡಳಿತ ಹೋಬಳಿ ಮಟ್ಟದ ‘ಅಸ್ಪೃಶ್ಯತಾ ನಿರ್ಮೂಲನಾ ಜಾಗೃತಿ’ ಕಾರ್ಯಕ್ರಮವನ್ನು ನಟರಾಜ ಸ್ವಾಮೀಜಿ ಉದ್ಘಾಟಿಸಿ ” ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವಣ್ಣನವರ ʼಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕʼ ಎಂಬ ನಾಣ್ಣುಡಿಯಂತೆ ಸಮಾಜದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಕರೆಕೊಟ್ಟರು.
” ಶತ ಶತಮಾನಗಳಿಂದ ಅಸ್ಪೃಶ್ಯತೆ, ಜಾತೀಯತೆ ಅವಮಾನದಲ್ಲಿ ಬದುಕುತ್ತಿದ್ದ ದಲಿತ ಸಮುದಾಯಗಳಿಗೆ ಒಂದು ಧನಿಯಾಗಿ ನಿಂತವರು ಬಸವಣ್ಣನವರು. ಮಾತನಾಡುವುದಕ್ಕೂ ಅವಕಾಶವಿಲ್ಲದ ಎಲ್ಲಾ ಕ್ಷೇತ್ರಗಳಲ್ಲೂ ನಿರ್ಬಂಧ ಹೇರಿ ಅವಮಾನದಿಂದ ಬದುಕುತ್ತಿದ್ದ ಅಸ್ಪೃಶ್ಯರಿಗೆ ಅಂದೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆಯನ್ನು ಕಲ್ಪಿಸಿಕೊಟ್ಟವರು. ದಲಿತ ಸಮುದಾಯದ ಹುಡುಗನಿಗೂ ಬ್ರಾಹ್ಮಣ ಸಮುದಾಯದ ಹುಡುಗಿಗೂ ಮದುವೆಯನ್ನು ಮಾಡಿ ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಬಸವಣ್ಣನವರ ಈ ರೀತಿಯ ಸಾಮಾಜಿಕ ಬದಲಾವಣೆಯಿಂದ ದಲಿತರಿಗೆ ಆತ್ಮಗೌರವ ಬಂದಂತಾಯಿತು. ಮಾತನಾಡುವ, ತಮ್ಮ ಅಭಿಪ್ರಾಯವನ್ನು ಮಂಡಿಸುವ ಅವಕಾಶ ಸಿಕ್ಕಿತು. ತದ ನಂತರದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರು ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂವಿಧಾನ ರಚನೆ ಮಾಡಲು ಕಾರಣವಾಯಿತು.
ಸಂವಿಧಾನ ಬಂದು 75 ವರ್ಷಗಳೇ ಕಳೆದರೂ ಇಂದಿಗೂ ಕೆಲವು ಭಾಗಗಳಲ್ಲಿ ಅಸ್ಪೃಶ್ಯತೆ ಅಸಮಾನತೆ ಜೀವಂತವಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ದಲಿತರನ್ನು ಇತರೆ ಸಮುದಾಯಗಳು ನೋಡುವ ಮನಸ್ಥಿತಿ ನಮ್ಮಲ್ಲಿ ಬದಲಾಗಬೇಕು. ಕೇವಲ ಕಾನೂನುಗಳಿಂದ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಕಷ್ಟವಾದ ಕೆಲಸವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಿ ಅನಿಷ್ಟ ಪದ್ಧತಿಯನ್ನು ನಾವು ನೀವೆಲ್ಲರೂ ಸೇರಿ ತೊಲಗಿಸಬೇಕಾಗಿದೆ “ಎಂದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ” ಐದು ಸಾವಿರ ವರ್ಷಗಳಿಂದ ದಲಿತರಿಗೆ ಬೀಸುವ ಗಾಳಿ, ಸೂರ್ಯನ ಬೆಳಕು ಇವೆರಡನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಿಷಯಗಳಲ್ಲೂ ನಿರ್ಬಂಧಪಡಿಸಲಾಗಿತ್ತು. ಈ ಅಸ್ಪೃಶ್ಯತೆಯ ಭಯಾನಕತೆಯನ್ನು ದಲಿತರು ಅನಿವಾರ್ಯವಾಗಿ ಅನುಭವಿಸುತ್ತಾ ಬರುತ್ತಿದ್ದರು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ತದನಂತರದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಬರುವ ತನಕ ದಲಿತರ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಸಂವಿಧಾನಬದ್ಧವಾಗಿ ಅಸ್ಪೃಶ್ಯತೆ ನಿರ್ಮೂಲನೆ ಕಾನೂನುಗಳಿದ್ದರೂ ಕೆಲವು ಕಡೆ ಹೊಟೇಲ್, ಕ್ಷೌರದ ಅಂಗಡಿ, ದೇವಸ್ಥಾನಗಳಿಗೆ ದಲಿತರಿಗೆ ನಿರ್ಬಂಧಿಸಲಾಗುತ್ತಿದೆ. ಇಂತಹ ಅಸಮಾನತೆಯನ್ನು ದಲಿತರು ಇನ್ನೆಷ್ಟು ವರ್ಷಗಳ ಕಾಲ ಅನುಭವಿಸಬೇಕು. ದಲಿತರ ರಕ್ಷಣೆಗೆ ಕಾನೂನುಗಳಿದ್ದರೂ ಜಾರಿ ಮಾಡುವ ಅಧಿಕಾರಿಗಳ ಮನಸ್ಸು ಮಲೀನವಾಗಿದೆ.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಮನೋಭಾವ ಲಾಭ ನಷ್ಟಗಳಲ್ಲಿ ಕೂಡಿದೆ. ಇಂತಹ ಸಂಕಷ್ಟದ ಸ್ಥಿತಿಯನ್ನು ದಲಿತರು ಇಂದಿಗೂ ಅನುಭವಿಸುತ್ತಿದ್ದೇವೆ. ಇಂತಹ ಅಸಮಾನತೆ ಮತ್ತು ದೌರ್ಜನ್ಯಗಳನ್ನು ದಲಿತರು ಅನುಭವಿಸುತ್ತಿದ್ದರೂ ಎಂದೂ ಹಿಂಸಾತ್ಮಕ ಮಾರ್ಗವನ್ನು ಹಿಡಿಯದೆ ತಮ್ಮ ನೋವನ್ನು ತಾವೇ ಅನುಭವಿಸುತ್ತಾ ಸಮಾನತೆಯ ಅವಕಾಶಕ್ಕಾಗಿ ಪರಿತಪಿಸುತ್ತಿರುವುದನ್ನು ಇತರೆ ಸಮುದಾಯಗಳು ಒಳಗಣ್ಣಿನಿಂದ ನೋಡಬೇಕಾಗಿದೆ. ಈ ದಿಕ್ಕಿನಲ್ಲಿ ಇತರೆ ಸಮುದಾಯಗಳು ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆಯೆಂಬ ನರಕ ಯಾತನೆಗಳನ್ನು ಇಂದಿಗೂ ಅನುಭವಿಸುತ್ತಿರುವ ದಲಿತರನ್ನು ಮನುಷ್ಯರ ರೀತಿ ನೋಡಬೇಕು. ಯಾವ ಸಮುದಾಯಗಳು ದಲಿತರಿಗೆ ಅವಮಾನಿಸುತ್ತದೋ, ಅಪಮಾನಿಸುತ್ತದೋ ಅದೇ ಸಮುದಾಯದ ಜನರು ಪ್ರೀತಿ ಗೌರವಗಳಿಂದ ಕೈ ಹಿಡಿದು ನಡೆಸಿಕೊಂಡು ಹೋಗುವ ವಾತಾವರಣ ಆಗಬೇಕಾಗಿದೆ. ಈ ದಿಕ್ಕಿನಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲಾಧಿಕಾರಿ ಭೇಟಿ ಮಾಡಿ ಕೆಎಸ್ಐಸಿ ಉಳಿಸುವಂತೆ ಮನವಿ ಮಾಡಿದ ದಸಂಸ
ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ಗುರುಪ್ರಸಾದ್,ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ್ ಕುಮಾರ್, ಜ್ಞಾನ ಜ್ಯೋತಿ ಸಂಸ್ಥೆಯ ಹೇಮಾವತಿ, ಗಾವಡಗೆರೆ ಉಪತಹಸೀಲ್ದಾರ್ ಶೋಭಾ, ಆರ್ ಐ ಹೇಮಂತ್, ಕಂದಾಯ ಅಧಿಕಾರಿ ವಿಜಯ್ ಕುಮಾರ್, ಪಲ್ಲವಿ, ಗಾವಡಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಶೋಭಾ, ಪಿಡಿಓ ಮಂಜುಳಾ, ಜಾಬಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷಕ್ಷೆ ಯಶೋಧ ಬಾಯಿ, ಕಟ್ಟೆಮಳಲವಾಡಿ ಗ್ರಾಮ ಪಂಚಾಯ್ತಿ ಪಿಡಿಓ ವಿಜಯಕುಮಾರಿ, ಬಿಳಿಗೆರೆ ಪಿಡಿಓ ಶೀಲಾ, ಪರಿಶಿಷ್ಟ ಪಂಗಡ ಇಲಾಖೆಯ ಪುಷ್ಪಾ, ದಲಿತ ಮುಖಂಡರಾದ ಆಂಜನೇಯ, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಡಿಗೆ ಸಹಾಯಕರು, ಆರೋಗ್ಯ ಇಲಾಖೆ ಸಿಬ್ಬಂಧಿಗಳು, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂಧಿಗಳು ಇದ್ದರು.