ಕನ್ನಡದ ಬೆಳವಣಿಗೆಯಲ್ಲಿ ಸಿನಿಮಾಗಳ ಪಾತ್ರವೂ ಬಹಳಷ್ಟಿದೆ. ಸಾಹಿತ್ಯದ ಹಲವಾರು ಕೃತಿಗಳು ಸಿನಿಮಾಗಳಾಗಿವೆ. ಸಿನಿಮಾ ಮತ್ತು ರಂಗಭೂಮಿಯಲ್ಲಿ ಸಾಹಿತಿಗಳು ಹಲವು ಪ್ರಯೋಗಗಳನ್ನು ಮಾಡಿದ್ದಾರೆ ಎಂದು ವನ್ಯಜೀವಿ ಛಾಯಾಗ್ರಾಹಕ ಲೋಕೇಶ ಮೊಸಳೆ ಹೇಳಿದ್ದಾರೆ.
ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ‘ಬಹುರೂಪಿ ಚಲನಚಿತ್ರೋತ್ಸವಕ್ಕೆ ಅವರು ಚಾಲನೆ ನೀಡಿದರು. “ಸಾಹಿತ್ಯ, ರಂಗಭೂಮಿ, ಸಿನಿಮಾ ಒಂದಕ್ಕೊಂದು ಅಂತರ್‌ಸಂಬಂಧ ಹೊಂದಿವೆ. 1931ರಲ್ಲಿ ಮೂಕಿ ಚಿತ್ರಗಳು ಬಂದಾಗ ರಂಗಭೂಮಿಗೆ ಉಳಿಗಾಲವೇ ಇಲ್ಲವೆಂದು ಕಲಾವಿದರು ಭಾವಿಸಿದ್ದರು. ಆದರೆ, ನಂತರದಲ್ಲಿ ರಂಗಭೂಮಿಯೇ ಸಿನಿಮಾವನ್ನು ಬೆಳೆಸಿದೆ” ಎಂದರು.
“1934ರಲ್ಲಿ ಸತಿ ಸುಲೋಚನ ಸಿನಿಮಾ ಮೊದಲ ಬಾರಿಗೆ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಳಿಯ ಗಯಾಟೆ ಎಂಬಲ್ಲಿ ಪ್ರದರ್ಶನಗೊಂಡಿತು. ಅಲ್ಲಿಂದ, 90 ವರ್ಷಗಳಲ್ಲಿ ಕನ್ನಡ ಸಿನಿಮಾ ಲೋಕ ವಿಸ್ತಾರಗೊಂಡಿದೆ. ಸಿನಿಮಾಗಳ ಚೌಕಟ್ಟು ವಿಸ್ತರಣೆಯಾಗಿದೆ” ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಚಲನಚಿತ್ರೋತ್ಸವದ ಸಂಯೋಜಕ ಕೆ ಮನು, ನಾಟಕೋತ್ಸವದ ಸಂಚಾಲಕ ಪ್ರೊ. ಎಚ್.ಎಸ್ ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ರಂಗಾಯಣ ನಿರ್ದೇಶಕಿ ನಿರ್ಮಲಾ ಮಠಪತಿ ಹಾಜರಿದ್ದರು.