ಮೈಸೂರಿನ ಕಲಾಮಂದಿರದಲ್ಲಿ ಇಂದು ಬಸವ ಬಳಗ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ “ಬಸವ ಜಯಂತಿ” ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ ‘ ಬಸವ ಚರಿತ್ರೆ ‘ ಎಂಬುದು ಪ್ರಜಾಪ್ರಭುತ್ವ ಸ್ಥಾಪನೆಯ ಹೋರಾಟವಾಗಿದೆ ಎಂದರು.
” ಬುದ್ಧ ತನ್ನ ಬಿಕ್ಕುಗಳ ಮುಖಾಂತರ ಪ್ರಜಾಪ್ರಭುತ್ವದ ಬೀಜ ಬಿತ್ತಿದರು. ಆ ಬೀಜವು ಬಸವಣ್ಣನವರ ಮೂಲಕ ಅನುಭವ ಮಂಟಪದ ರೂಪತಾಳಿ ಮೊಳಕೆ ಹೊಡೆಯಿತು. ಹೀಗೆ ಬಿತ್ತಿ ಮೊಳಕೆಯೊಡೆದ ಬೀಜವು ಡಾ. ಬಿ. ಆರ್. ಅಂಬೇಡ್ಕರ್ ಅವರ ಮುಖಾಂತರ ಮರವಾಗಿ ಬೆಳೆಯಿತು. ಆ ಮರದಲ್ಲಿ ಬೆಳೆದ ಫಲವನ್ನು ನಾವೆಲ್ಲರೂ ಇಂದು ಅನುಭವಿಸುತ್ತಿದ್ದೇವೆ. “
” ಇದರ ಮೂಲ ಉದ್ದೇಶ ಜನರು ತಮ್ಮ ಬೇಕಾದಂತೆ ಬದುಕನ್ನು ಬದುಕಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಜನಪರ ಯೋಜನೆ ಜಾರಿ ಮಾಡಿ ಸಮ ಸಮಾಜದ ನಿರ್ಮಾಣದ ಕಡೆಗೆ ನಾವು ಸಾಗಬೇಕಿದೆ. ನಮ್ಮ ದೇಶದ ಸಾಮಾಜಿಕ ಅಸಮಾನತೆ, ವರ್ಣಾಶ್ರಮದ ನೀತಿಗಳು, ಲಿಂಗತಾರತಮ್ಯ, ಜಾತೀಯತೆ ಮತ್ತು ಅಸ್ಪೃಶ್ಯತೆ ಇಡೀ ಮಾನವ ಕುಲಕ್ಕೆ ಅಂಟಿದ ಕಳಂಕವಾಗಿದೆ. ಈ ಎಲ್ಲಾ ತಾರತಮ್ಯಗಳ ವಿರುದ್ದವಾಗಿ ಬಸವಣ್ಣನವರು ತಮ್ಮ ಪ್ರಬಲವಾದ ಹೋರಾಟ ಮತ್ತು ನಿಲುವುಗಳ ಮೂಲಕ ನಿರ್ಮೂಲನೆ ಕಾರ್ಯಕ್ಕೆ ಮುಂದಾದರು. “

ಬಸವಣ್ಣ ‘ದಯೆ ಇಲ್ಲದ ಧರ್ಮ ಯಾಕೆ’ ಎಂದು ಪ್ರಶ್ನಿಸಿದ್ದಾರೆ. ಕೆಲವು ವರ್ಗದ ಜನರನ್ನು ದೇವಸ್ಥಾನಗಳ ಪ್ರವೇಶಕ್ಕೆ ನಿರಾಕರಿಸದಾಗ ಬಸವಣ್ಣನವರು ‘ನನ್ನ ದೇಹವೆ ದೇಗುಲ’ ಎಂಬ ಸಂದೇಶದ ಮೂಲಕ ದೇವರ ಪರಿಕಲ್ಪನೆಯನ್ನು ಜಗದಲಕ್ಕೆ ಹಾಗೂ ಆಕಾಶದಗಲಕ್ಕೆ ವಿಸ್ತಿರಿಸಿದರು. ಈ ಬಗೆಯ ಉದಾತ್ತ ಕಲ್ಪನೆ ಹೊಂದಿರುವ ಬಸವ ತತ್ವದ ಅನುಯಾಯಿಗಳು ಅವರನ್ನು ಹೊಗಳುತ್ತ ಕೂರಬಾರದು.
ಬಸವಣ್ಣನವರನ್ನು ನಮ್ಮ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ನಾವು ಸಾಂಸ್ಕೃತಿಕವಾಗಿ ಬಲಾಢ್ಯರಾಗದಿದ್ದರೆ ಬಲಿಷ್ಠವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಬಿಜ್ಜಳನ ಆಸ್ಥಾನದಲ್ಲಿ ಒಂದು ಭಾಗದ ನಿಧಿಯನ್ನು ಕೊಡುವುದಾಗಿ ಹೇಳಿದಾಗ, ಅರ್ಥ ಸಚಿವರಾಗಿ ಬಸವಣ್ಣ ಅದನ್ನು ನಿರಾಕರಿಸಿದ್ದರು. ಅದು ಸುಖೀರಾಜ್ಯದ ನಿರ್ಮಾಣಕ್ಕಾಗಿ ಮೀಸಲಿಡಬೇಕು ಎಂದಿದ್ದರು.
ಇಂದು ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ವಿಂಗಡಿಸಲಾಗುತ್ತಿದೆ. ಸಮುದಾಯದ ಸಾಮರಸ್ಯವನ್ನು ಹಾಳು ಮಾಡಲಾಗುತ್ತಿದೆ. ಲಿಂಗತಾರತಮ್ಯ, ಮಹಿಳಾ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಆಚರಣೆಗಳು ಮನುಕುಲವನ್ನು ಅದೋಗತಿಗೆ ತಲುಪಿಸುತ್ತಿವೆ. ಇವೆಲ್ಲವನ್ನು ಪುನರುಜ್ಜೀವನಗೊಳಿಸಿ ಸಮಸಮಾಜ ನಿರ್ಮಾಣ ಮಾಡಲು ಅಗತ್ಯವಿರುವುದು ಬಸವಣ್ಣನ ನಿಲುವುಗಳು. ಆ ಮೂಲಕ ಸುಖೀರಾಜ್ಯದ ಸ್ಥಾಪನೆಯಾಗಲಿದೆ.

ಬುದ್ದ, ಬಸವ, ಅಂಬೇಡ್ಕರ್ ಎಂದರೆ ಆಚರಣೆಗಷ್ಟೇ ಸೀಮಿತವಲ್ಲ. ಇವರೆಲ್ಲರೂ ಬಹುದೊಡ್ಡ ಪ್ರಜಾಪ್ರಭುತ್ವವಾದಿಗಳು, ವಿಶ್ವಮಾನ್ಯತೆ ಗಳಿಸಿರುವ ಸಮಾಜ ಸುಧಾರಕರು. ವಿದೇಶದಲ್ಲಿ ನಾವು ಬುದ್ದನ ನಾಡಿನವರು ಎನ್ನುತ್ತೇವೆ. ಈ ಪರಂಪರೆಯಲ್ಲಿ ನಡೆದು ಬಂದಿರುವ ನಾವು ಈ ಮಹನೀಯರ ವಿಚಾರಗಳು ನಮ್ಮ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನಕ್ಕೆ ಪ್ರೇರಣಾಶಕ್ತಿಯಾಗಬೇಕಿದೆ. ಈ ಮುಖೇನ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಬೇಕಿದೆ.
ಈ ವಿಶೇಷ ವೀಡಿಯೋ ನೋಡಿದ್ದೀರಾ? https://youtu.be/lCRTpdU_HVk?si=0hzOqNBoCveN5wZX
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೌರಾಡಳಿತ ಸಚಿವ ರಹೀಂಖಾನ್, ಶಾಸಕರಾದ ತನ್ವೀರ್ ಸೇಠ್ , ಜಿ.ಟಿ. ದೇವೇಗೌಡ, ಡಿ.ರವಿಶಂಕರ್, ಕೆ.ಹರೀಶ್ ಗೌಡ, ದರ್ಶನ್ ಧ್ರುವ ನಾರಾಯಣ, ಶ್ರೀವತ್ಸ, ಹೆಚ್.ಎಂ.ಗಣೇಶ್ ಪ್ರಸಾದ್, ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸೇರಿದಂತೆ ಬಸವ ಬಳಗದ ಮುಖಂಡರು ಇದ್ದರು.