ಮೈಸೂರು ನಗರದ ಎಐಡಿಎಸ್ಓ ಕಚೇರಿಯಲ್ಲಿ ಎರಡು ದಿನದ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೀಳೂರು ಮಾತನಾಡಿ ” ಇತಿಹಾಸದಲ್ಲಿ ಬೇರೆ ಬೇರೆ ದೇಶಗಳಲ್ಲಿ ಆಯಾ ಕಾಲಘಟ್ಟದಲ್ಲಿ ಹಲವಾರು ಮಹಾನ್ ವ್ಯಕ್ತಿಗಳು ಉದಯಿಸಿದ್ದಾರೆ. ಅದೇ ರೀತಿ ಭಾರತದ ನವೋದಯ ಕಾಲದಲ್ಲಿ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್ ,ಸಾವಿತ್ರಿಬಾಯಿ ಫುಲೆ ,ಜ್ಯೋತಿರಾವ್ ಫುಲೆ ಮುಂತಾದವರು ಇದ್ದರು. ಅದೇ ರೀತಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಉದಯಿಸಿದ ಉತ್ಕೃಷ್ಟ ವ್ಯಕ್ತಿತ್ವಗಳಲ್ಲಿ ನೇತಾಜಿ ಮತ್ತು ಭಗತ್ ಸಿಂಗ್ ಮುಂಚೂಣಿಯಲ್ಲಿದ್ದವರು .ಸ್ವಾತಂತ್ರ್ಯ ಸಂಗ್ರಾಮದ ನೈಜ ಗುರಿಯನ್ನು ಸ್ಪಷ್ಟವಾಗಿ ನಿಖರವಾಗಿ ಭಗತ್ ಸಿಂಗ್ ಮತ್ತು ನೇತಾಜಿ ಸಾರಿದರು “.
” ರಷ್ಯಾದಲ್ಲಿ ನಡೆದ ಕ್ರಾಂತಿ. ಭಾರತದ ಕ್ರಾಂತಿಕಾರಿಗಳ ಮೇಲೆ ಗಾಢ ಪ್ರಭಾವ ಬಿರಿತ್ತು. ಭಗತ್ ಸಿಂಗ್ ಮತ್ತು ನೇತಾಜಿ ಇಬ್ಬರೂ ರಷ್ಯಾ ಮಾದರಿ ಸಮಾಜವಾದಿ ಭಾರತ ನಿರ್ಮಿಸಬೇಕೆಂಬ ಆಶಯ ಹೊಂದಿದ್ದರು. ಮಾನವನಿಂದ ಮಾನವನ ಶೋಷಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬುದು ಅವರ ನಿಲುವಾಗಿತ್ತು. ಭಾರತದಲ್ಲಿ ಕ್ರಾಂತಿ ನೆರವೇರಬೇಕು, ಆ ಕ್ರಾಂತಿಯನ್ನು ಈ ದೇಶದ ಸಂಪತ್ತನ್ನು ಸೃಷ್ಟಿ ಮಾಡುವ ಕಾರ್ಮಿಕ ಮತ್ತು ರೈತರು ನೆರವೇರಿಸಬೇಕೆಂಬ ಕನಸನ್ನು ಕಂಡಿದ್ದರು. ಆದರೆ, ಅವರ ಕನಸು ಕನಸಾಗಿಯೇ ಉಳಿದಿದೆ. ಯಾವ ಕ್ರಾಂತಿ, ಜನತೆಗೆ ಸ್ವಾತಂತ್ರ್ಯವನ್ನು ತಂದುಕೊಟ್ಟು ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ದೇಶದ ಮೂಲೆ ಮೂಲೆಗೂ ಒಯ್ಯಬೇಕು “.

” ಕೋಟ್ಯಾಂತರ ಮರ್ದಿತ ಜನರಿಗೆ ತಲುಪಿಸಬೇಕು. ಶೋಷಣೆಗೆ ಮುಕ್ತಾಯ ಹಾಡಲು ಸಮಾಜವಾದಿ ಕ್ರಾಂತಿ ಅನಿವಾರ್ಯ. ಪ್ರಸ್ತುತ ಸಮಾಜದಲ್ಲಿ 20 ಕೋಟಿ ಜನ ಹಸಿವೆಯಿಂದ ನರಳುತ್ತಿದ್ದಾರೆ. ಪ್ರತಿದಿನ 4500 ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ. 7000 ಜನರು ಪ್ರತಿದಿನ ಹಸಿವೆಯಿಂದ ಸಾಯುತ್ತಿದ್ದಾರೆ. ಶಿಕ್ಷಣದ ವ್ಯಾಪಾರಿಕರಣ, ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ಮತ್ತು ರೈತ ಕಾರ್ಮಿಕರ ಸಾವು ಮಿತಿಮೀರಿದೆ. ಇವೆಲ್ಲ ಸಮಸ್ಯೆಗಳನ್ನು ತೊಡೆದು ಹಾಕಬೇಕೆಂದರೆ ಸಮಾಜವಾದಿ ಭಾರತದಿಂದ ಮಾತ್ರವೇ ಸಾಧ್ಯ ಎಂದು ಭಗತ್ ಸಿಂಗ್ ಮತ್ತು ನೇತಾಜಿ ನಂಬಿದ್ದರು. ಆದ್ದರಿಂದ, ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಜನರು ಸಜ್ಜಾಗಬೇಕೆಂದು ” ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ದೇಶಕ್ಕೆ ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆ ಅಪಾರ : ಸಂಸದ ಸುನಿಲ್ ಬೋಸ್
ಶಿಬಿರದಲ್ಲಿ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ , ಪದಾಧಿಕಾರಿಗಳಾದ ಚಂದನ ,ಚಂದ್ರಿಕಾ ,ಹೇಮ, ದಿಶಾ, ಅಂಜಲಿ, ಅಭಿಷೇಕ್ ,ನಂದೀಶ್, ಬೀರಪ್ಪ ,ಅಕ್ಷರ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.