ಭಾರತ ದೇಶ ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿತ್ತು. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿರುವುದು ಇತಿಹಾಸ. ಆದರೆ ಬ್ರಿಟಿಷರ ಗೋರಿಗಳು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದು, ಸ್ಮಶಾನದಲ್ಲಿ ಮೌನವಾಗಿವೆ ಬ್ರಿಟಿಷರ ಗೋರಿಗಳು. ಬ್ರಿಟಿಷರು ದೇಶ ಬಿಟ್ಟರೂ ಅವರ ಸಮಾಧಿಗಳು ದೇಶ ಬಿಟ್ಟಿಲ್ಲ. ಅಂದಿನ ಕುರುಹುಗಳಾಗಿ ನಮ್ಮ ಮುಂದೆಯೇ ಸಾಕ್ಷಿಯಾಗಿವೆ.
ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಸರಿ ಸುಮಾರು 250 ವರ್ಷಗಳ ಹಿಂದಿನ ಸಮಾಧಿಗಳು ಇಂದಿಗೂ ಇವೆ. ಯಾರಿಗೂ ಕಾಣದಂತೆ, ಇತಿಹಾಸದಲ್ಲಿ ದಾಖಲಾಗದೆ, ಯಾರಿಗೂ ಗೋಚರಿಸದಂತಿದ್ದು, ಪಾಳು ಬಿದ್ದಿವೆ ಸಮಾಧಿಗಳು.
ಇತಿಹಾಸದ ಪುಟದಲ್ಲಿ ಏನೋ ಹೇಳ ಹೊರಟಿ, ಏನನ್ನು ಹೇಳಲಾರದೆ ಮೌನವಾಗಿವೆ ಅನಿಸುತ್ತದೆ ಸಮಾಧಿಗಳ ನೋಡುವಾಗ. ‘ಎಲ್ಲೋ ಹುಟ್ಟಿ, ಇನ್ನೆಲ್ಲೋ ಸಮಾಧಿಯಾದವರ ಕಥೆ. ಇಲ್ಲಿ ಯಾಕೆ ಬಂದರು? ಯಾಕೆ ಇದ್ದರು? ಇದ್ದಿದ್ದರೂ ಗೊತ್ತಾಯಿತೆ! ಅನ್ನುವುದನ್ನು ಹುಡುಕುವ ಕೆಲಸವೂ ಆಗದೆ ಇತಿಹಾಸದ ಗರ್ಭ ಸೇರಿವೆ ಈ ಅನಾಥ ಬ್ರಿಟಿಷ್ ಸಮಾಧಿಗಳು.
ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು, ಇಡೀ ದೇಶವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅಧಿಪತ್ಯ ಸಾಧಿಸಿದರು ಆನ್ನುವುದನ್ನೆಲ್ಲ ಓದಿದ್ದೇವೆ, ಕೇಳಿದ್ದೇವೆ. ಆದ್ರೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನೂರಾರು ಸಮಾಧಿಗಳು ಒಂದೆಡೆ ಇರುವುದು ರೋಚಕತೆಗೆ ಕಾರಣವಾಗಿದೆ.

ಡಿ ದೇವರಾಜ ಅರಸು ಅವರ ಕರ್ಮಭೂಮಿಯಾದ ಹುಣಸೂರು, ಬ್ರಿಟಿಷರು ಇಲ್ಲಿಯೇ ಇದ್ದು, ಕಾಫಿ ಕ್ಯೂರಿಂಗ್ ವರ್ಕ್ಸ್ ನಡೆಸಿದ್ದರು. ವ್ಯಾಪಾರ, ವ್ಯವಹಾರಕ್ಕಾಗಿ ಇತ್ತಕಡೆ ಬಂದು ನೆಲೆಸಿದ್ದರು. ಕೆಲವರ ಪ್ರಕಾರ ಕೊಡಗಿನಲ್ಲಿ ಕಾಫಿ ಎಸ್ಟೇಟ್ ಮಾಲೀಕರಾಗಿ ಇಲ್ಲಿಯೇ ಉಳಿದಿದ್ದರು ಎನ್ನುವ ಮಾತುಗಳಿವೆ. ವಾಸ ಮಾಡಿದ ಬಂಗಲೆ, ಕಚೇರಿ, ಕಾಫಿ ಕ್ಯೂರಿಂಗ್ ವರ್ಕ್ಸ್ ಹಾಗೂ ಅಂದಿನ ಕಾಲದಲ್ಲಿ ಹುಣಸೂರಿಗೆ ಇಂಗ್ಲೆಂಡ್‌ನಿಂದ ತರಿಸಿದ್ದ ಯಂತ್ರೋಪಕರಣಗಳು ಈಗಲೂ ಕಾಣಬಹುದು. ಬ್ರಿಟಿಷರ ಸಮಾಧಿಗಳು ಹುಣಸೂರಿನ ಲಕ್ಷ್ಮಣತೀರ್ಥ ಬಳಿ ಅದುವೇ ಬ್ರಾಹ್ಮಣರ ಬೀದಿಯ ವಾಸವಿ ಗೋ ಶಾಲೆ(ವಾಸವಿ ವಾನ ಪ್ರಸ್ತಾಶ್ರಮ)ದ ಬಳಿ ಇವೆ.

ಕಾಫಿವರ್ಕ್ಸ್ ಸುಮಾರು ಕ್ರಿ.ಶ. 1800 ರ ದಶಕದಲ್ಲಿ ಆರಂಭವಾಗಿರುವ ಸಾಧ್ಯತೆ ಇದ್ದು, ಅಂದಿನ ಕಾಫಿವರ್ಕ್ಸ್ನ ಮುಖ್ಯಸ್ಥರು ಮತ್ತು ಅವರ ಸಂಬಂಧಿಕರುಗಳ ಗೋರಿಗಳಾಗಿರಬಹುದು ಎಂಬುದು ಸ್ಥಳೀಯರ ಬಲವಾದ ಅಭಿಪ್ರಾಯವಾಗಿದೆ.
ಬ್ರಿಟಿಷ್ ಸಮಾಧಿಗಳ ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡು, ದಟ್ಟವಾಗಿ ಹರಡಿ ನಿಂತಿದೆ. ಸಮಾಧಿಗಳು ಇಂದಿಗೂ ಸುಸ್ಥಿತಿಯಲ್ಲಿದ್ದು, ನಿಧಿಗಳ್ಳರ ದಾಳಿಗೆ ತುತ್ತಾಗಿವೆ. ರಕ್ಷಣೆಯಿಲ್ಲ. ಇಂತಹ ಸ್ಮಾರಕಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸಮಾಧಿಗಳ ಜಾಗ ಅವಸಾನದ ಅಂಚಿಗೆ ತಲುಪುತ್ತಿವೆ.

ಸೊಳ್ಳೆಯ ಕಾಟ, ಹಾವುಗಳ ಓಡಾಟ, ಕಿತ್ತು ನಿಂತ ಬೇಲಿ, ಮಳೆ ಗಾಳಿಗೆ ಕುಂದಿವೆ, ಬಿಸಿಲಿಗೆ ಮಸುಕಾಗಿವೆ. ಇವನ್ನೆಲ್ಲ ಸಂರಕ್ಷಣೆ ಮಾಡುವ ಗೋಜಿಗೆ ಯಾರೂ ಹೋದಂತಿಲ್ಲ. ಸ್ಥಳೀಯರಿಗೆ ಇಂತಹದೊಂದು ಇತಿಹಾಸ ಸಾರಬಲ್ಲ ಕುರುಹುಗಳಿವೆ ಎನ್ನುವುದೇ ತಿಳಿದಿಲ್ಲ. ಬ್ರಿಟಿಷ್ ಸಮಾಧಿಗಳು ಕೇವಲ ಗೋರಿಗಳಷ್ಟೇ ಅಲ್ಲ ಗ್ರಾನೈಟ್, ಮಾರ್ಬಲ್ ಹೊದಿಕೆಗಳಿಂದ ಕೂಡಿವೆ. ಸಮಾಧಿಯ ಮೇಲ್ಭಾಗ ಪಂಚಲೋಹ, ಚಿನ್ನದ ಶಿಲುಬೆ ಇದ್ದಿರಬಹುದು. ಕಳ್ಳರು ಅದನ್ನೆಲ್ಲ ದೋಚಿರುವಂತೆ ಬಾಸವಾಗುತ್ತದೆ. ನಿಧಿಗಳ್ಳರ ಓಡಾಟಕ್ಕೂ ಸೊರಗಿವೆ.

ನಿಧಿಗಳ್ಳರ ಓಡಾಟಕ್ಕೂ ಸೊರಗಿವೆ. ಬ್ರಿಟಿಷ್ ಸಮಾಧಿಗಳು ಬಹಳ ಎತ್ತರವಾಗಿದ್ದು, ಗೋಪುರದಂತೆ ಕಾಣುತ್ತವೆ. ನೆಲಭಾಗದಲ್ಲಿ ಕಮಾನು ಆಕೃತಿಯಲ್ಲಿ ದೊಡ್ಡದಾದ ಕಿಂಡಿಗಳಿದ್ದು, ಕೆಳಗಡೆ ಇಳಿಯುವಷ್ಟು ಸ್ಥಳವಕಾಶವಿದೆ. ಇನ್ನೂ ಕೆಳಗಿಳಿದರೆ ಪ್ರಾಂಗಣ ರೀತಿಯಲ್ಲಿ ವಿಶಾಲವಾದ ಗ್ರಾನೈಟ್ ಹೊದಿಕೆಯಿದೆ. ಕಡಿಮೆ ಅಂದರು 20 ಅಡಿ ವಿಶಾಲವಾದ ಕೊಠಡಿಯ ಮಾದರಿಯಲ್ಲಿದೆ. ಇನ್ನು ಅದರ ಕೆಳಗಡೆ ಸತ್ತವರನ್ನು ಸಮಾಧಿ ಮಾಡಿರಬಹುದು. ಇಷ್ಟು ದೊಡ್ಡದಾದ ಬೃಹತ್ ಸಮಾಧಿಗಳನ್ನು ಯಾಕೆ ಮಾಡಿದ್ದರು ಎನ್ನುವ ಕುತೂಹಲಕ್ಕೆ ಕೊನೆಯೇ ಇಲ್ಲ.

ಈ ದಿನ.ಕಾಮ್ ಸ್ಥಳಕ್ಕೆ ಭೇಟಿ ಕೊಟ್ಟಾಗ ಪುಟ್ಟ ಮಗುವಿನ ನೆಲ ಹಾಸು ಸಮಾಧಿಯಿಂದ ಹಿಡಿದು, ಬೃಹತ್ತಾದ ಸಮಾಧಿಯವರೆಗೂ ಇರುವುದು ಕಂಡುಬಂದಿದೆ. ಅದರಲ್ಲಿ ಒಂದು ಸಮಾಧಿಯ ಮೇಲೆ ಇಂತಹದ್ದೊಂದು ಬರಹವಿದೆ.
IN MEMORY
OF
CHARLOTTE MATILDA
THE BELOVED WIFE
OF
CONDUCTER W.J.GACE
COMMISSARIAT DEPART
WHO DIED ON THE 9TH
DAY OF MAY 1858
AGED
X L V ||| YEARS
“OH MOTHER DEAR TWOULD BE A SIN TO WISH THE BACK TO ME
YET OF I THINK HOW I SHOULD FEEL IF SUOHATHING COULD BE “
“ಓ ನನ್ನ ಪ್ರೀತಿಯ ತಾಯೇ, ನೀನು ನನ್ನ ಬಳಿ ಹಿಂತಿರುಗುವಂತೆ ಹಾರೈಸುವುದು ಪಾಪ. ಆದರೂ ಸಾಧ್ಯವಾದರೆ ನನಗೆ ಹೇಗೆ ಹಿತವೆನಿಸುತ್ತದೆಂಬುದನ್ನು ನಾನು ಯೋಚಿಸುತ್ತೇನೆ” ಎಂಬುದು
ಎಲ್ಲ ಗೋರಿಗಳ ಮೇಲೆಯೂ ದುಃಖಭರಿತ ಮತ್ತು ಭಾವನಾತ್ಮಕ ಸಾಲುಗಳಿವೆ. ತಮ್ಮವರನ್ನು ಕಳೆದುಕೊಂಡವರ ನೋವಿದೆ. ಸದ್ಯ ಈ ಗೋರಿಗಳ ಹತ್ತಿರಕ್ಕೆ ನೇರವಾಗಿ ಹೋಗಲು ಯಾವುದೇ ದಾರಿಗಳಿಲ್ಲ. ಬ್ರಿಟಿಷರು ನಮ್ಮನ್ನು ಆಳಿದ್ದರೂ ಕೂಡ ಐತಿಹಾಸಿಕವಾಗಿ ಇಂಥ ಸ್ಥಳಗಳು ಬಹಳ ಮಹತ್ವವನ್ನು ಪಡೆಯುತ್ತವೆ. ಇವುಗಳ ಸಂರಕ್ಷಣೆ ಸ್ಥಳೀಯರು ಮತ್ತು ಪ್ರಾಚ್ಯವಸ್ತು ಇಲಾಖೆಯದ್ದಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅಕಾಲಿಕ ಮಳೆಗೆ ಬೆಳೆ ನಾಶ; ಸಂಕಷ್ಟದಲ್ಲಿ ರೈತಾಪಿ ವರ್ಗ
ಇದರ ಬಗ್ಗೆ ಸಂಶೋಧನೆಯಾಗಲಿ, ಉಲ್ಲೇಖಗಳು ಇಲ್ಲದೇ ಇರುವುದು ಶೋಚನೀಯವಾದ ಸಂಗತಿ. ಮೈಸೂರಿನಲ್ಲಿ ಇಂತಹ ಸ್ಮಾರಕಗಳನ್ನು ಉಳಿಸಿಕೊಳ್ಳದೆ ಇರುವುದು ಪುರಾತತ್ವ ಇಲಾಖೆ, ಜಿಲ್ಲಾಡಳಿತ, ತಾಲೂಕು ಆಡಳಿತ, ಸರ್ಕಾರಗಳ ವೈಫಲ್ಯವೇ ಸರಿ. ಇಂತಹ ಸ್ಮಾರಕಗಳನ್ನು ಹುಡುಕಿ ಸಂರಕ್ಷಿಸಬೇಕಿತ್ತು. ಅಧ್ಯಯನ ನಡೆಸಿ, ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕಿತ್ತು. ದುರಾದೃಷ್ಟವಶಾತ್ ಇಂತಹ ಯಾವುದೇ ಪ್ರಯತ್ನ ನಡೆಯದೇ ಇರುವುದು ಖಂಡನೀಯ.
ಇತಿಹಾಸದ ಕುರುಹುಗಳನ್ನು ಕಾಪಾಡಿಕೊಳ್ಳದೆ ಇರುವುದು ನಮ್ಮೆಲ್ಲರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಈ ದಿನ.ಕಾಮ್
ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸಕ್ಕೆ ಮುಂದಾಗಿದೆ. ಮುಂದಿನ ಸಂಚಿಕೆಯಲ್ಲಿ ಸಂಶೋಧಕರಿಂದ, ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿ, ಸಮಗ್ರ ಮಾಹಿತಿ ನೀಡಲಾಗುತ್ತದೆ.
