ತಿ.ನರಸೀಪುರ ತಾಲೂಕಿನ 36 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗಮನ ಹರಿಸುವಂತೆ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಕೆ ಎಂ ಗಾಯತ್ರಿ ಅವರು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ತಿ.ನರಸೀಪುರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವ ಜಲ ಜೀವನ್ ಮಿಷನ್, ಬಡತನ ನಿರ್ಮೂಲನೆ ಮತ್ತು ಯೋಜನೆಯಡಿ ನೋಂದಾಯಿತ ಎಲ್ಲ ಜಾಬ್ ಕಾರ್ಡ್ ದಾರರಿಗೆ 150 ದಿನಗಳ ಕೆಲಸದ ಗ್ಯಾರಂಟಿಗಳನ್ನು ಒದಗಿಸುವ ಮನರೇಗಾ ಅನುಷ್ಠಾನ, ಸ್ವಚ್ಛ ಭಾರತ್ ಮಿಷನ್, ಮಿಷನ್ ಅಂತ್ಯೋದಯ, ರಾಷ್ಟ್ರೀಯ ನಗರ ಮತ್ತು ಗ್ರಾಮೀಣ ಜೀವನೋಪಾಯ ಕಾರ್ಯಕ್ರಮ, ಡಿಜಿಟಲ್ ಗ್ರಂಥಾಲಯದಲ್ಲಿ ಗ್ರಾಮ ಪಂಚಾಯಿತಿ ಸಾಧಿಸಿದ ಪ್ರಗತಿಯನ್ನು ಗಾಯತ್ರಿ ಪರಿಶೀಲಿಸಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ತಲುಪದಂತೆ ಕೇಂದ್ರ ಸರ್ಕಾರದಿಂದ ಷಡ್ಯಂತ್ರ: ಪ್ರಿಯಾಂಕ್ ಖರ್ಗೆ ಕಿಡಿ
ಗರ್ಗೇಶ್ವರಿ ಗ್ರಾಮ ಪಂಚಾಯತ್ ಸ್ಥಾಪಿಸಿರುವ ಡಿಜಿಟಲ್ ಗ್ರಂಥಾಲಯ ಮತ್ತು ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಅವರು ಪರಿಶೀಲಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಶ್ಮಿ ಸೇರಿದಂತೆ ಇತರರು ಇದ್ದರು.