ಮೈಸೂರಿನ ಅಶೋಕಪುರಂ ಬಡಾವಣೆಯ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ.
ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿಕ್ಕಗರಡಿ, ದೊಡ್ಡಗರಡಿ, ಸಮುದಾಯ ಭವನ, ಆಟದ ಮೈದಾನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಇದೇ ವೇಳೆ ಮುಂದಿನ ದಿನಗಳಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲು ಸಚಿವ ಮಹದೇವಪ್ಪ ಹಾಗೂ ಸ್ಥಳೀಯ ಮುಖಂಡರುಗಳಿಗೆ ಸೂಚನೆ ನೀಡಿದರು.
85 ಮಂದಿ ವೀಳ್ಯದೆಲೆ ಬೆಳೆಗಾರರಿಗೆ 5 ಗುಂಟೆ ಜಮೀನಿನ ಹಕ್ಕುಪತ್ರ ವಿತರಣೆ ಮಾಡಿದ ಮುಖ್ಯಮಂತ್ರಿಯವರು, “ಪಾರಂಪರಿಕ ಬೆಳೆಯಾದ ಮೈಸೂರು ವೀಳ್ಯದೆಲೆ ಬೆಳೆಗಾರರು ಹೆಚ್ಚಿರುವ ಹಾಗೂ ದೇಶದಲ್ಲಿ ಅತಿಹೆಚ್ಚು ದಲಿತ ಜನಾಂಗದ ಜನ ವಾಸಿಸುತ್ತಿರುವ ಅಶೋಕಪುರಂ ಪ್ರದೇಶವನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ದವಾಗಿದೆ” ಎಂದರು.
“ಇದರೊಂದಿಗೆ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ವೀರನಗೆರೆ ಬದನೆಕಾಯಿ ಮುಂತಾದ ಬೆಳೆಗಳನ್ನು ಅಭಿವೃದ್ಧಿಪಡಿಸಲು ಬಜೆಟ್ ಘೋಷಣೆಯೊಂದಿಗೆ ಕ್ರಮವಹಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಅಶೋಕಪುರಂ ಪ್ರದೇಶದಲ್ಲಿ ವಿದ್ಯಾವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂಬೇಡ್ಕರರ ಆಶಯದಂತೆ ಶಿಕ್ಷಣ ಹೋರಾಟದ ಮೂಲಕ ಮುಂದೆ ಬರಬೇಕಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ತುಳಿತಕ್ಕೊಳಗಾದವರು ಮುಖ್ಯವಾಹಿನಿಗೆ ಬರಬೇಕೆಂಬ ನಿಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ 24.01ರಷ್ಟು ಅನುದಾನವನ್ನು ಈ ವರ್ಗಗಳಿಗೆ ಮೀಸಲಿಟ್ಟಿದೆ. ಅದರಂತೆ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ₹48 ಲಕ್ಷ ಕೋಟಿಗಳಾಗಿದ್ದು, ಕನಿಷ್ಟ ₹7 ಲಕ್ಷ ಕೋಟಿಗಳನ್ನು ಈ ಸಮುದಾಯಗಳಿಗೆ ಮೀಸಲಿಡಬೇಕು. ಆದರೆ ಹಣ ನೀಡಿರುವುದು ಕೇವಲ ₹60 ಸಾವಿರ ಕೋಟಿ. ಇದರಿಂದ ಕೇಂದ್ರ ಸರ್ಕಾರಕ್ಕೆ ತಳಸಮುದಾಯಗಳ ಬಗೆಗಿರುವ ಕಾಳಜಿ ಗೊತ್ತಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಾಮಾಜಿಕ ನ್ಯಾಯ ನೀಡಿಕೆಯಲ್ಲಿ ಅಂಬೇಡ್ಕರರ ಆಲೋಚನೆ ವಿಶಿಷ್ಠವಾದುದು. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದವರು, ಅವಕಾಶ ವಂಚಿತರನ್ನು ಗುರುತಿಸಿದವರು ಅದರ ಫಲವಾಗಿ ಸಂವಿಧಾನದ ಮೂಲಕ ನೀಡಿದ ಸಮಾನತೆ ಬಡವನಿಗೂ ಒಂದೇ ವೋಟು, ಶ್ರೀಮಂತನಿಗೂ ಒಂದೇ ವೋಟು. ರಾಷ್ಟ್ರಪತಿಗೂ ಒಂದೇ ವೋಟು, ಪೌರಕಾರ್ಮಿಕರಿಗೂ ಒಂದೇ ವೋಟು. ಇಂತಹ ಉದಾತ್ತ ಚಿಂತನೆಗಳು ಚಿರಸ್ಥಾಯಿಯಾಗಿ ಉಳಿಯಬೇಕೆಂದು ಅವರ ಸಮಗ್ರ ಸಂಪುಟಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆಡಳಿತ ಅಧಿಕಾರಿಗಳ ವಿರುದ್ಧ ಪೌರಕಾರ್ಮಿಕರ ಅಕ್ರೋಶ; ರಸ್ತೆತಡೆದು ಪ್ರತಿಭಟನೆ
ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಮಾತನಾಡಿ, ಅಶೋಕಪುರಂ ಪ್ರದೇಶ ಬಹಳ ಜನದಟ್ಟಣೆಯಿಂದ ಕೂಡಿದ್ದು, ಸಮೀಪದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಿ ವಿಶೇಷ ಕೌಶಲಾಭಿವೃದ್ದಿ ತರಬೇತಿ ಕಾರ್ಯಕ್ರಮ ಮಾಡುವುದು ಹಾಗೂ ಈ ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಚಿಂತನೆ ಇದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈಗಾಗಲೇ ₹20 ಕೋಟಿ ಖರ್ಚು ಮಾಡಿದ್ದು, ಮತ್ತೆ ₹19 ಕೋಟಿ ಮಂಜೂರಾಗಿದೆ” ಎಂದರು.
ಸಭೆಯಲ್ಲಿ ಶಾಸಕ ಶ್ರೀವತ್ಸ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ವಿಧಾನ ಪರಿಷತ್ ಸದಸ್ಯ ಡಾ ತಿಮ್ಮಯ್ಯ, ಮಂಜೇಗೌಡ, ಮಾಜಿ ಶಾಸಕ ಸೋಮಶೇಖರ್, ಜ್ಞಾನ ಪ್ರಕಾಶ ಸ್ವಾಮೀಜಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.