ಬರ ಪರಿಸ್ಥಿತಿ ನಡುವೆಯೂ ನಾಡಹಬ್ಬ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗಿದ್ದು, ದಸರಾ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಹಾಗೂ ಮೈಸೂರಿನ ಸಮಸ್ತ ಜನತೆಗೆ ಸರ್ಕಾರದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅಭಿನಂದನೆ ತಿಳಿಸಿದರು.
ಮೈಸೂರಿನ ನಜರಬಾದ್ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರು. “ಸಮುದಾಯದ ನಡುವೆ ಸಾಮರಸ್ಯ ಬೆಸೆಯುವ ರೀತಿಯಲ್ಲಿ ದಸರಾ ಆಚರಿಸಲಾಗಿದೆ. ಸಂಸ್ಕೃತಿ ಹಾಗೂ ಪರಂಪರೆಗೆ ಧಕ್ಕೆ ಬಾರದ ರೀತಿಯಲ್ಲಿ ಶಾಂತಿಯುತವಾಗಿ ನಡೆಸುವ ಮೂಲಕ ದಸರಾ ಹಬ್ಬ ದೇಶಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದೆ. ಕಳೆದ 100 ವರ್ಷಗಳಲ್ಲಿ ಕಂಡರಿಯದ ನೀರಿನ ಅಭಾವ ಈ ಬಾರಿ ಕಾಣಿಸಿಕೊಂಡಿತು. ಹಾಗಾಗಿ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಬಾರದೆಂಬ ನಿರ್ಧಾರಕ್ಕೆ ಬರಲಾಯಿತು. ಆದರೆ, ನಾಡಹಬ್ಬ ಎಲ್ಲರನ್ನೂ ತಲುಪಬೇಕೆಂಬ ಉದ್ದೇಶದಿಂದ ಸಾಂಪ್ರದಾಯಿಕ ದಸರಾ ಆಚರಣೆಗೆ ನಿರ್ಧರಿಸಲಾಯಿತು” ಎಂದರು.
“ದೇಶ, ವಿದೇಶಗಳಿಂದ ಆಗಮಿಸಿದ್ದವರೂ ಸೇರಿದಂತೆ 10 ಲಕ್ಷಕ್ಕೂ ಅಧಿಕ ಮಂದಿ ದಸರಾ ಜಂಬೂಸವಾರಿಯನ್ನು ವೀಕ್ಷಿಸಿದ್ದಾರೆ. ಮೈಸೂರು ಜನರು ಶಿಸ್ತು, ಶಾಂತಿಯಿಂದ ದಸರಾ ಆಚರಣೆಗೆ ಕೈ ಜೋಡಿಸಿದ್ದಾರೆ. ಕಾನೂನು ಪರಿಪಾಲನೆಯನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇನ್ನು ಅಧಿಕಾರಿ ವರ್ಗ ತಮಗೆ ವಹಿಸಿದ್ದ ಕೆಲಸವನ್ನು ನಿಷ್ಠೆಯಿಂದ ಮಾಡಿದೆ” ಎಂದು ಅಭಿನಂದಿಸಿದರು.
“ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳು ದಸರಾ ಹಬ್ಬದ ಕೆಲಸದಲ್ಲಿ ಕಾರ್ಯೋನ್ಮುಖರಾಗಿದ್ದರು. ಇದೀಗ ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರೆ. ಬರಗಾಲದ ಕಾರಣ ಹಳ್ಳಿಗಳಿಗೆ ತೆರಳಿ ರೈತರ ನೆರವಿಗೆ ಧಾವಿಸಲಿದ್ದಾರೆ” ಎಂದು ಹೇಳಿದರು.
“ದಸರಾ ದೀಪಾಲಂಕಾರ ನವೆಂಬರ್ 5ರವರೆಗೆ ಇರಲಿದೆ. ಈ ಬಾರಿಯ ದೀಪಾಲಂಕಾರದಲ್ಲಿ ಸಾಮಾಜಿಕ ಸಂದೇಶಗಳು, ಪ್ರಜಾಪ್ರಭುತ್ವ, ಸಂವಿಧಾನ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು ರಾರಾಜಿಸಿವೆ. ಸಂಬಂಧಿಸಿದ ದಸರಾ ಖರ್ಚು ವೆಚ್ಚಗಳನ್ನು ಜಿಲ್ಲಾಧಿಕಾರಿಯವರು ಶೀಘ್ರವೇ ನೀಡಲಿದ್ದಾರೆ” ಎಂದು ಸಚಿವರು ತಿಳಿಸಿದರು.
ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರಿಗೆ ಬೆದರಿಕೆ ಕರೆ ಬಂದ ವಿಚಾರದ ಬಗ್ಗೆ ಮಾತನಾಡಿದ ಸಚಿವರು, “ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಹೀಗಾಗಿ ಲಕ್ಷ್ಮಣ್ ಅವರಿಗೆ ಬಂದ ಬೆದರಿಕೆ ಕರೆ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಧಿಕಾರಿಗಳ ಅಮಾನತು; ಅನಾಥವಾದ ಕೃಷಿ ಇಲಾಖೆ
“ರಾಜೀವ್ ತಾರಾನಾಥ್ ಅವರ ಬಳಿ ಕಮಿಷನ್ ಕೇಳಿದ್ದಾರೆಂಬುದು ಆಧಾರ ರಹಿತ. ಈ ರೀತಿ ನಡೆಯಲು ಸಾಧ್ಯವೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ ಬಿ ಜೆ ವಿಜಯಕುಮಾರ್, ನಗರಾಧ್ಯಕ್ಷ ಆರ್ ಮೂರ್ತಿ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ನಗರಪಾಲಿಕೆ ಮಾಜಿ ಸದಸ್ಯ ಎಂ ಶಿವಣ್ಣ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಎಂ ರಾಮು ಸೇರಿದಂತೆ ಇತರರು ಇದ್ದರು.