ಮೈಸೂರಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ಮಾಡಿರುವ ಧೋರಣೆ ಖಂಡಿಸಿ, ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮನೆ ಮುತ್ತಿಗೆಗೆ ಯತ್ನ ನಡೆಸಿದ್ದು, ಇದೇ ವೇಳೆ ಪೊಲೀಸರು ಮುಖಂಡರನ್ನು ಬಂಧಿಸಿದ್ದಾರೆ.
ವಿಜಯನಗರದಲ್ಲಿರುವ ನಿವಾಸದ ಬಳಿ ಜಮಾಯಿಸಿದ ದಸಂಸ ಕಾರ್ಯಕರ್ತರು 2024 ರ ಡಿ.6 ರಂದು ಮೈಸೂರು ಪುರಭವನದ ಮುಂದೆ ದಸಂಸ ಪ್ರತಿಭಟನೆ ನಡೆಸಿದಾಗ ಜಿಲ್ಲಾಡಳಿತ ಕೂಡಲೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿತ್ತು.ಆದರೆ, ನುಡಿದಂತೆ ನಡೆದುಕೊಂಡಿಲ್ಲ, ಕೇವಲ ಭರವಸೆಯಾಗಿ ಉಳಿದುಕೊಂಡಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಕಳೆದ 13 ವರ್ಷಗಳಿಂದ ನಡೆಯುತ್ತಿದ್ದು,ಇಚ್ಛಾಶಕ್ತಿಯ ಕೊರತೆಯಿಂದ ಕುಂಟುತ್ತಾ ಸಾಗುತ್ತಿದೆ.ತದನಂತರ ಆರಂಭಗೊಂಡ ಜಿಲ್ಲಾಧಿಕಾರಿ ಕಚೇರಿ,ಪೊಲೀಸ್ ಆಯುಕ್ತರ ಕಚೇರಿ,ಮಹಾರಾಣಿ ಕಾಲೇಜು, ಜಿಲ್ಲಾಸ್ಪತ್ರೆ, ಜಯದೇವ ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸರ್ಕಾರಿ ಕಟ್ಟಡಗಳು ಶೀಘ್ರವೇ ಪೂರ್ಣಗೊಂಡು ಲೋಕಾರ್ಪಣೆಗೊಂಡಿವೆ.

ಆದರೆ,ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಭವನ ಮಾತ್ರ ಇದಿಷ್ಟು ವರ್ಷ ಕಳೆದರೂ ಪೂರ್ಣಗೊಳ್ಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದುವರೆಗೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಭಂದಪಟ್ಟ ಅಧಿಕಾರಿಗಳಿಗೆ,ಇಲಾಖೆಗೆ ಸೂಚನೆ ನೀಡದಿರುವುದು ಶೋಚನೀಯ ಎಂದು ಪ್ರತಿಭಟನಕಾರರು ಕಿಡಿಕಾರಿದ್ದಾರೆ.
ಕೂಡಲೇ,ಸರ್ಕಾರ,ಜಿಲ್ಲಾಡಳಿತ ಗಮನ ಹರಿಸಬೇಕು ಡಾ ಬಿ ಆರ್ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಂಡು ಜನರ ಲಭ್ಯತೆಗೆ ಸಿಗುವಂತಾಗಬೇಕು, ಅದುವರೆಗೂ ದಲಿತ ಸಂಘರ್ಷ ಸಮಿತಿ ಹೋರಾಟ ಮುಂದುವರೆಸುತ್ತದೆ.ಪೊಲೀಸರ ಬಂಧನಕ್ಕೆ ಜಗ್ಗುವುದಿಲ್ಲ , ಹೋರಾಟ ಇದಿಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ,ಎಂದು ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯಕೋಟೆ, ಅಲಗೂಡು ಶಿವಕುಮಾರ್, ಶಂಭುಲಿಂಗ ಸ್ವಾಮಿ,ಶಿವಬುದ್ಧಿ, ಚೋರನ ಹಳ್ಳಿ ಶಿವಣ್ಣ, ಅತ್ತಿಕುಪ್ಪೆ ರಾಮಕೃಷ್ಣ,ಚಿಕ್ಕ ಹುಣಸೂರು ರಾಜು,ಸಿದ್ದೇಶ್ ಸೇರಿದಂತೆ ಇನ್ನಿತರರು ಇದ್ದರು.