ದಸರಾ ಮಹೋತ್ಸವಕ್ಕೆ ಮೈಸೂರಿಗೆ ಪ್ರವೇಶಿಸುವ ಪ್ರವಾಸಿ ವಾಹನಗಳಿಗೆ ರಾಜ್ಯ ಸರ್ಕಾರ ಈ ಬಾರಿ ತೆರಿಗೆ ವಿನಾಯಿತಿ ಘೋಷಿಸಿಲ್ಲ. ರಾಜ್ಯದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ಈಗಾಗಲೇ ಹೆಚ್ಚಿನ ಹೊರೆಯಾಗಿರುವುದರಿಂದ ತೆರಿಗೆ ವಿನಾಯಿತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
“ತೆರಿಗೆ ವಿನಾಯಿತಿ ನೀಡದಿರುವುದರಿಂದ ರಾಜ್ಯಕ್ಕೆ ಪ್ರವೇಶಿಸುವ ಪ್ರವಾಸಿ ವಾಹನಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಫೆಡರೇಶನ್ ಆಫ್ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳು ತಿಳಿಸಿವೆ.
“ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭಿಸಿದ ನಂತರ ರಾಜ್ಯ ಸರ್ಕಾರ ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆದರೆ ತೆರಿಗೆ ವಿನಾಯಿತಿ ನೀಡುವ ಮೂಲಕ ಪ್ರವಾಸಿಗರ ಒಳಹರಿವು ಹೆಚ್ಚಾಗುತ್ತದೆ. ಇದರಿಂದ ಪರೋಕ್ಷ ತೆರಿಗೆಗಳ ಮೂಲಕ ಆದಾಯ ಗಳಿಸಬಹುದು ಎಂಬುದನ್ನು ಅರಿತುಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿದರು.
“ಪ್ರತಿ ವರ್ಷ ದಸರಾಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಿಂದ ಸುಮಾರು 10,000 ಹಳದಿ ಬೋರ್ಡ್ ಕಾರುಗಳು, 3,000 ಮ್ಯಾಕ್ಸಿ ಕ್ಯಾಬ್‌ಗಳು ಮತ್ತು ಸುಮಾರು 1,000 ಬಸ್‌ಗಳು ಮೈಸೂರಿಗೆ ಬರುತ್ತವೆ. ಸಾವಿರಾರು ಪ್ರಯಾಣಿಕರು ಸಾಂಸ್ಕೃತಿಕ ನಗರಕ್ಕೆ ಬರುತ್ತಾರೆ. ಜತೆಗೆ ಹತ್ತಿರದ ಪ್ರವಾಸಿ ತಾಣಗಳ ಸುತ್ತಲೂ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ದಸರಾ ಹಬ್ಬದ ಸಮಯದಲ್ಲಿ 15 ದಿನಗಳ ಅವಧಿಗೆ ತೆರಿಗೆ ವಿನಾಯಿತಿ ನೀಡುತ್ತಿತ್ತು. ಆದರೆ ಈ ವರ್ಷ ವಿನಾಯಿತಿ ನೀಡದಿರಲು ನಿರ್ಧರಿಸಿದೆ. ಇದರಿಂದ ಗ್ಯಾರಂಟಿ ಯೋಜನೆಗಳನ್ನು ನಡೆಸಲು ಸರ್ಕಾರ ಭಾರೀ ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವುದು ಕಂಡುಬರುತ್ತಿದೆ” ಎಂದು ಒಕ್ಕೂಟದ ನಾಮನಿರ್ದೇಶಿತ ಅಧ್ಯಕ್ಷ ನಟರಾಜ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.
“ಈ ವರ್ಷ ತೆರಿಗೆ ವಿನಾಯಿತಿ ನೀಡುವ ಮೂಲಕ ಉಂಟಾಗುವ ನಷ್ಟವನ್ನು ಮಾತ್ರ ಸರ್ಕಾರ ಲೆಕ್ಕಹಾಕಿದೆ. ಆದರೆ ಪ್ರವಾಸಿಗರ ಮೂಲಕ ಪಡೆಯಬಹುದಾದ ನೇರ ಮತ್ತು ಪರೋಕ್ಷ ತೆರಿಗೆಗಳನ್ನು ಹಾಗೂ ತಮ್ಮ ಆದಾಯಕ್ಕಾಗಿ ಪ್ರವಾಸಿಗರನ್ನು ಮಾತ್ರ ಅವಲಂಬಿಸಿರುವ ಜನರ ಜೀವನೋಪಾಯವನ್ನು ಪರಿಗಣಿಸಿಲ್ಲ” ಎಂದು ಶರ್ಮಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಹಿಷಾ ದಸರಾ ಅಸಂಖ್ಯಾತರಿಗೆ ಶಕ್ತಿ ತುಂಬಿದೆ: ಪಿ.ಎನ್. ರಾಮಯ್ಯ
“55 ಆಸನಗಳಿರುವ ಇತರ ರಾಜ್ಯದ ಬಸ್ ಸುಮಾರು 18,000 ರೂ.ಗಳನ್ನು ತೆರಿಗೆಯಾಗಿ ಪಾವತಿಸುತ್ತದೆ. ಜತೆಗೆ ವಾಹನದ ಪ್ರಕಾರ ಮತ್ತು ಆಸನ ಸಾಮರ್ಥ್ಯದ ಮೇಲೆ ತೆರಿಗೆ ಬದಲಾಗುತ್ತದೆ” ಎಂದು ತಿಳಿಸಿದರು.
“ಪ್ರತಿ ವರ್ಷ ದಸರಾ ಉತ್ಸವ ಪ್ರಾರಂಭವಾಗುವ ಒಂದು ದಿನ ಮೊದಲು ವಾಹನಗಳ ತೆರಿಗೆ ವಿನಾಯಿತಿಯನ್ನು ಘೋಷಿಸುತ್ತಿದ್ದರು. ಈ ಬಾರಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯದ ಕಾರಣ ತೆರಿಗೆ ವಿನಾಯಿತಿಯನ್ನು ಘೋಷಿಸಿಲ್ಲ” ಎಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.