ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹೊಸದಾಗಿ ತಾಲೂಕು ಸರ್ಕಾರಿ ಆಸ್ಪತ್ರೆ ಕಟ್ಟಡ ಕಟ್ಟಿದ್ದರೂ ಕೂಡ ಈವರೆಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಒಂದೂವರೆ ವರ್ಷದ ಹಿಂದೆಯೇ ಸುಸಜ್ಜಿತವಾದ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಸರ್ಕಾರಿ ಆಸ್ಪತ್ರೆಗೆ ಬೇಕಿರುವ ಉಪಕರಣಗಳು ಈವರೆಗೆ ಬಂದಿಲ್ಲ.
ಈಗಲೂ ಕೂಡ ಹಳೆಯದಾದ ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಯಾವುದೇ ಮೂಲ ಸೌಲಭ್ಯವಿಲ್ಲ. ಆಸ್ಪತ್ರೆ ಕಿರಿದಾಗಿದೆ. ಶೌಚಾಲಯಗಳಿಲ್ಲ, ಶುಚಿತ್ವದ ಕೊರತೆ, ರೋಗಿಗಳಿಗೆ ಅಗತ್ಯವಿರುವ ಸ್ಕ್ಯಾನಿಂಗ್, ಎಕ್ಸ್‌ರೇ, ಇಸಿಜಿ, ಬ್ಲಡ್ ಪರೀಕ್ಷೆ ಮತ್ತಾವುದೇ ಸೌಲಭ್ಯಗಳು ಸರಿಯಾದ ರೀತಿಯಲ್ಲಿಲ್ಲ. ಇದ್ದರೂ ಕೂಡ ರೋಗಿಗಳಿಗೆ ಸರಿಯಾದ ಸಮಯಕ್ಕೆ ತುರ್ತಾಗಿ ಲಭ್ಯವಿಲ್ಲ.
ಹುಣಸೂರು ಪಟ್ಟಣ ಮಡಿಕೇರಿ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿದ್ದು, ಅಪಘಾತ ಸಂಭವಿಸಿ ತುರ್ತು ಚಿಕಿತ್ಸೆಗೆ ಬರುವ ಪರಿಸ್ಥಿತಿಯಿಲ್ಲ. ಯಾವುದೇ ತುರ್ತು ಸೇವೆ ಅಗತ್ಯ ಬಿದ್ದರೆ ಮೈಸೂರಿನ ಕೆ ಆರ್ ಆಸ್ಪತ್ರೆ ಅವಲಂಬಿಸಬೇಕಾಗಿದೆ. ಬಾಣಂತಿಯರಿಗೆ, ವೃದ್ದರಿಗೆ ಕೂರಲು, ವಿಶ್ರಾಂತಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ. ಹೆರಿಗೆ ವಾರ್ಡ್ ಕೂಡ ದುಃಸ್ಥಿತಿಯಲ್ಲಿದ್ದು, ಕಿರಿಕಿರಿ ಅನುಭವಿಸಲಾರದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇದು ಇವತ್ತಿನ ಸಮಸ್ಯೆ ಅಲ್ಲ. ಹುಣಸೂರಿನಲ್ಲಿ ಆಸ್ಪತ್ರೆಯದೊಂದೇ ಸಮಸ್ಯೆ ಅನ್ನುವಂತೆಯೂ ಇಲ್ಲ. ಹುಣಸೂರು ಅಭಿವೃದ್ಧಿ ಕುಂಠಿತ ತಾಲೂಕು, ಒಂದಲ್ಲ ಎರಡಲ್ಲ ಹಲವಾರು ಸಮಸ್ಯೆಗಳನ್ನು ಇಲ್ಲಿನ ಜನ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.
“ಸರ್ಕಾರ ಜನರ ತೆರಿಗೆ ಹಣ ಖರ್ಚು ಮಾಡಿ ಆಸ್ಪತ್ರೆ ಕಟ್ಟಿದೆ. ಆದರೆ ಜಿಲ್ಲಾಡಳಿತ, ಅಧಿಕಾರಿಗಳು ಮುತುವರ್ಜಿವಹಿಸಿ ಸರ್ಕಾರದಿಂದ ಅಗತ್ಯ ಇರುವ ನೆರವು ಪಡೆದು ಜನರ ಸೇವೆಗೆ ಲಭ್ಯವಾಗುವ ಕೆಲಸ ಮಾಡಬೇಕಿತ್ತು. ಆದರೆ ಹುಣಸೂರು ತಾಲೂಕಿನಲ್ಲಿ ದೇವರಾಜ ಅರಸು ಅವರನ್ನು ಹೊರತುಪಡಿಸಿ ಯಾವೊಬ್ಬ ಜನಪ್ರತಿನಿಧಿಯೂ ಜನರ ಕಾಳಜಿವಹಿಸಿಲ್ಲ” ಎಂದು ಆರೋಪಿಸಿದರು.
“ಹಳೆಯ ಕಟ್ಟಡದಲ್ಲಿ ಚಿಕಿತ್ಸೆ ನೀಡಲು ವೈದ್ಯರಿಗೂ ಸಾಧ್ಯವಾಗುತ್ತಿಲ್ಲ. ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹೊರ ರೋಗಿಗಳು ಬರ್ತಾರೆ. ಇನ್ನು ಒಳ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದೆ ಈಗಿರುವ ಆಸ್ಪತ್ರೆ ಅನುಕೂಲವಾಗಿಲ್ಲ. ಯಾವುದೇ ಸೌಲಭ್ಯವಿಲ್ಲ. ಜನ ಕೂರಲೂ ಆಗದಂತೆ ದಟ್ಟಣೆ ಇರುತ್ತದೆ. ಇನ್ನು ಯಾವುದೇ ಪರೀಕ್ಷೆ ಆಗಬೇಕು ಅಂದರೆ ಹೊರಗೆ ಹೋಗಿ ಖಾಸಗಿಯಾಗಿ ದುಡ್ಡು ಕೊಟ್ಟು ಮಾಡಿಸಿಕೊಳ್ಳಬೇಕು. ಇಂತಹ ಕೆಟ್ಟ ಪರಿಸ್ಥಿತಿಗೆ ಇಂದಿನ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳೇ ನೇರ ಕಾರಣ” ಎಂದು ದೂಷಿಸಿದರು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಮಾತನಾಡಿ, “ಗ್ರಾಮೀಣ ಭಾಗದಿಂದ ತಾಲೂಕು ಆಸ್ಪತ್ರೆಗೆ ರೋಗಿಗಳು ಬರ್ತಾರೆ. ಕನಿಷ್ಟಪಕ್ಷ ಹೋಬಳಿ ಕೇಂದ್ರ, ಗ್ರಾಮಗಳಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿರುವಷ್ಟು ಸೌಲಭ್ಯ ಕೂಡ ಇಲ್ಲಿಲ್ಲ. ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ, ಸ್ವಚ್ಛತೆಯಂತೂ ಕೇಳುವಂತಿಲ್ಲ. ಮೂಗು ಮುಚ್ಚಿಕೊಂಡು ಓಡಾಡಬೇಕು. ತಾಲೂಕು ಸರ್ಕಾರಿ ಆಸ್ಪತ್ರೆಗೆ ಹೋಗಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು” ಎಂದರು.
“ಸರ್ಕಾರ ಜನರಿಗೆ ಉಚಿತವಾಗಿ ಸೇವೆ ನೀಡಬೇಕೆಂದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ,
ಸಮರ್ಪಕವಾದ ಸವಲತ್ತು ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿವೆ. ಈ ಹಣೆಬರಹಕ್ಕೆ ಸರ್ಕಾರ ಜನರ ದುಡ್ಡನ್ನು ಇಷ್ಟ ಬಂದಂತೆ ಖರ್ಚು ಮಾಡಿ ಕಟ್ಟಡ ಕಟ್ಟಿ ನಾಯಿ, ನರಿ ವಾಸಮಾಡಲು, ಪುಂಡ ಪೋಕರಿಗಳು ಕುಡಿದು, ಇಸ್ಪೀಟ್ ಆಡಲು, ಅನೈತಿಕ ಕೆಲಸಕ್ಕೆ ಬಳಸಿಕೊಳ್ಳಲು ಹೊಸ ಕಟ್ಟಡ ನಿರ್ಮಾಣ ಮಾಡಿದ್ದಾರೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವರಾಜು ಮುತ್ತುರಾಯನ ಹೊಸಳ್ಳಿ ಮಾತನಾಡಿ, “ನಮಗೂ ಸಾಕಾಗಿದೆ. ಹೋರಾಟಗಾರರು,
ಸಂಘಟನೆಗಳು ಎಷ್ಟೇ ಮನವಿ ಮಾಡಲಿ, ಪ್ರತಿಭಟನೆ ಮಾಡಲಿ, ದೂರು ನೀಡಲಿ ತಾಲೂಕು ಆಡಳಿತ ಜಡ್ಡುಗಟ್ಟಿದೆ. ಯಾವುದೇ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿಲ್ಲ. ಆಗಿರುವ ಕೆಲಸ ಕೂಡ ಪೂರ್ಣಗೊಳಿಸಿ ಜನರಿಗೆ ಸಿಗುವಂತೆ ಮಾಡುವುದಿಲ್ಲ. ಎಲ್ಲ ಪಾಳು ಬಿದ್ದು ಹಾಳಾಗಬೇಕು. ಜನಪ್ರತಿನಿಧಿಗಳಿಗೆ ತಮ್ಮದೇ ಹೆಸರು ಬರಬೇಕು, ಇನ್ಯಾರಿಗೋ ಹೆಸರು ಹೋಗಬಾರದೆಂಬ ಸ್ವಾರ್ಥ. ನಾನು ಅನ್ನುವ ಅಹಂನಿಂದ ತಾಲೂಕು ಅಕ್ಷರಶಃ ಬಡವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪ್ಯಾಲೆಸ್ತೀನಿಯನ್ನರ ವಿರುದ್ಧ ಇಸ್ರೇಲಿ ಪಡೆ ದೌರ್ಜನ್ಯ; ಸರ್ಕಾರದ ನಿರ್ಣಾಯಕ ಕ್ರಮಕ್ಕೆ ಆಗ್ರಹ
“ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳದೇ ಇದ್ದರೆ ಪ್ರಗತಿಪರ ಸಂಘಟನೆಗಳು ಸೇರಿ ಇದೇ ಹೊಸ ಸರ್ಕಾರಿ ಆಸ್ಪತ್ರೆ ಕಟ್ಟಡದ ಎದುರು ಬೃಹತ್ ಚಳವಳಿ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
